SPECIAL: ವರದಿ: ರಾಚಪ್ಪ ಬನ್ನಿದಿನ್ನಿ ಬಾಗಲಕೋಟೆ: ಕೋವಿಡ್ ಎರಡನೆ ಅಲೆಯ ತಗ್ಗಿರುವ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆಯ ಕರಿ ಹರಿಯುವುದನ್ನು ಆಚರಿಸಿದರು. ಬೆಳಗ್ಗೆ ಎತ್ತುಗಳಿಗೆ ಸಿಂಗಾರ ಮಾಡಿ, ಸಾಯಂಕಾಲ ಊರ ಅಗಸಿಯಲ್ಲಿ ಕರಿ ಹರಿಯಲಾಯಿತು. ಬಾಗಲಕೋಟೆ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಜನರೇ ಓಡಿಹೋಗಿ ಕರಿ ಹರಿಯುವ ವಿಶಿಷ್ಟ ಸಂಪ್ರದಾಯವಿದ್ದು, ಈ ಬಾರಿಯೂ ಆಚರಣೆ ಮಾಡಲಾಯಿತು. ಉತ್ತರ ಕರ್ನಾಟಕದಲ್ಲಿ ವರ್ಷದ ಮೊದಲ ಹಬ್ಬ ಉತ್ತರ ಕನಾ೯ಟಕದಲ್ಲಿ ರೈತರು ಕಾರಹುಣ್ಣಿಮೆ ಹಬ್ಬವನ್ನು ವರ್ಷದ ಮೊದಲ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು. ಉತ್ತರ ಕರ್ನಾಟಕದದಲ್ಲಿ ವಿಭಿನ್ನ, ಹಾಗೂ ರೈತರು ನಂಬಿಕೆಯಿಂದ ಕಾರ ಹುಣ್ಣಿಮೆ ಆಚರಿಸುವ ಪದ್ಧತಿ ತಲೆತಲಾಂತರದಿಂದ ಬಂದಿದೆ. ಕಾರಹುಣ್ಣಿಮೆ ದಿನ ಪ್ರಮುಖವಾಗಿ ಎತ್ತು, ಹೋರಿಗಳೇ ಆಕರ್ಷಣೆಯಾಗಿರುತ್ತವೆ. ಹುಣ್ಣಿಮೆಯಂದು ಎತ್ತು, ಹೋರಿಗಳ ಮೈತೊಳೆದು ರೈತರು ವಿವಿಧ ಬಗೆ ಶೃಂಗಾರದ ವಸ್ತುಗಳನ್ನು ಹಾಕುತ್ತಾರೆ. ಎತ್ತು, ಹೋರಿಗಳ ಕೊಂಬುಗಳಿಗೆ ಬಣ್ಣ ಬಳಿಯುತ್ತಾರೆ. ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡುತ್ತಾರೆ. ಎತ್ತು, ಹೋರಿಗಳಿಗೆ ಕೃಷಿ ಚಟುವಟಿಕೆಯಿಂದ ವಿರಾಮ ನೀಡಲಾಗಿರುತ್ತೆ. ಸಿಂಗರಿಸಲಾದ ಎತ್ತುಗಳಿಗೆ ಹೋಳಿಗೆ, ಕಡುಬು ಖಾದ್ಯಗಳನ್ನು ಮಾಡಿ ಉಣಬಡಿಸುವ ಮೂಲಕ ಅನ್ನದಾತರು ತಮ್ಮ ಎತ್ತುಗಳ ಮೇಲಿನ ಅಭಿಮಾನ ಮೆರೆಯುತ್ತಾರೆ. ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ ಕಾರ್ಯಕ್ರಮವೂ ಒಂದು. ಸಂಜೆಯಾಗುತ್ತಿದಂತೆ ಕರಿ ಹರಿಯುವುದು ನಡೆಯುತ್ತದೆ. ಊರ ಅಗಸಿಯಲ್ಲಿ ಬೇವಿನ ತಪ್ಪಲಿನ ತೋರಣದ ನಡುವೆ ಕೊಬ್ಬರಿಯನ್ನು ಕಟ್ಟಲಾಗಿರುತ್ತೆ. ಕರಿ ಹರಿಯಲು ಬಿಳಿ, ಹಾಗೂ ಕೆಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಹಲಗೆ ಸದ್ದು ಮಾಡುತ್ತಿದ್ದಂತೆ ಅಗಸಿ ಎದುರಿಗೆ ಕರಿ ಹರಿಯಲು ಎತ್ತುಗಳೊಂದಿಗೆ ರೈತರು ತಾ ಮುಂದು ನೀ ಮುಂದು ಎಂದು ಎತ್ತುಗಳನ್ನು ಓಡಿಸಿಕೊಂಡು ಬಂದು ಕರಿ ಹರಿಯುತ್ತಾರೆ. ಯಾವ ಬಣ್ಣದ ಎತ್ತು ಕರಿಹರಿಯುತ್ತೋ ಆ ಬಣ್ಣದ ಬೆಳೆ ಚೆನ್ನಾಗಿ ಬರುತ್ತೆ ಅನ್ನುವ ನಂಬಿಕೆ ರೈತರದ್ದಾಗಿದೆ. ಬಿಳಿ ಎತ್ತು ಮೊದಲು ಕರಿ ಹರಿದ್ರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆ. ಇನ್ನು ಕೆಂದು ಬಣ್ಣದ ಕರಿ ಹರಿದ್ರೆ ಮುಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತೆ ಅನ್ನುವ ನಂಬಿಕೆಯನ್ನು ರೈತರು ಹೊಂದಿದ್ದಾರೆ. ಮೊದಲು ಕರಿ ಹರಿದ ಎತ್ತಿಗೆ ರೈತರೆಲ್ಲರೂ ಸೇರಿ ಮೆರವಣಿಗೆ ಮಾಡುತ್ತಾರೆ. ಕರಿ ಹರಿದ ಬಳಿಕ ಗುಂಡು ಎತ್ತುವ ಸ್ಪರ್ಧೆ ಇರುತ್ತದೆ. ವರ್ಷವಿಡೀ ಕೃಷಿಯಲ್ಲಿ ತೊಡಗಿದ ರೈತರು ಗುಂಡು ಎತ್ತುವುದರರೊಂದಿಗೆ ದೈಹಿಕ ಕಸರತ್ತು ನಡೆಸುವ ಮೂಲಕ ಕ್ರೀಡಾ ಮನೋಭಾವ ಮೆರೆಯುತ್ತಾರೆ.