SPECIAL: ತೇಜಸ್ವಿ ಇದು ನಿಧನರಾದ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತೆ ಹನುಮಿ ಕ್ಷೇತ್ರ ಗೌಡ ಹೊನ್ನಾವರದ ಮಾಳ್ಕೋಡಿನಲ್ಲಿ ವಾಸವಾಗಿದ್ದರು. 74 ವರ್ಷದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹನುಮಿ ಗೌಡರಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಹನುಮಿ ಗೌಡ ಜನಿಸಿದ್ದು ಹೊನ್ನಾವರ ತಾಲೂಕಿನ ಅಳ್ಳಂಕಿ ಗ್ರಾಮದ ಯರ್ಜನಮೂಲೆಯಲ್ಲಿ. ಅವರ ತಾಯಿ ಗಣಪಿ, ತಂದೆ ನಾರಾಯಣ ಗೌಡ. ಹನುಮಿ ಗೌಡ ಅವರ ತಾಯಿಯ ತವರು ಮನೆಯಾದ ಹೈಗುಂದದಲ್ಲಿ ಬೆಳೆದರು. ಕೇವಲ ನಾಲ್ಕನೇ ತರಗತಿ ಓದಿಕೊಂಡು 13ರ ಹರೆಯದಲ್ಲಿ ಮದುವೆಯಾಗಿ ಮಾಳ್ಕೋಡಿನ ಗಂಡನ ಮನೆಗೆ ಸೇರಿದರು. ಹೆತ್ತಮ್ಮನಿಂದ ಬಳುವಳಿಯಾಗಿ ಬಂದಿದ್ದ ಜಾನಪದ ಹಾಡುಗಳನ್ನು ಗುನುಗುನಿಸುತ್ತ ಕಲಾ ಲೋಕದಲ್ಲಿ ಬೆಳೆದು ಗುರುತಿಸಿಕೊಂಡರು. ನೆರೆಹೊರೆಯಲ್ಲಿ ಹಿರಿಯರು ಹೇಳುತ್ತಿದ್ದ ಹಾಡುಗಳು ಕಿವಿಗೆ ಬಿದ್ದರೆ ಸಾಕಿತ್ತು, ಅದನ್ನು ತಕ್ಷಣ ನೆನಪಿಟ್ಟುಕೊಂಡು ಊರುಕೇರಿಗಳಲ್ಲಿ ಕಂಡವರ ಮನೆಯಲ್ಲಿ ಮದುವೆ, ಮುಂಜಿ, ಸೀಮಂತ, ನಾಮಕರಣ, ದೇವಕಾರ್ಯ ಹೀಗೆ ಹಬ್ಬ ಹರಿದಿನ ಶುಭಕಾರ್ಯಗಳಲ್ಲಿ ಹಾಡುತ್ತಿದ್ದರು. ಹನುಮಜ್ಜಿ ಮತ್ತು ಅವರ ಬಳಗವಿದ್ದರೆ ಅಲ್ಲಿ ಹಾಡಿನ ಸುಗ್ಗಿಯೇ ನೆರೆಯುತ್ತಿತ್ತು. ಕೇವಲ ಜಾನಪದ ಹಾಡುಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿರಲಿಲ್ಲ. ಕೇದಿಗೆ ಎಲೆಗಳಿಂದ ಚಾಪೆ ನೇಯುವುದು ಗೊತ್ತಿತ್ತು, ಶೇಡಿ (ಜೇಡಿಮಣ್ಣಿನ ಹುಡಿ) ಪ್ರವೀಣೆಯಾಗಿದ್ದರು. ಅಡಿಕೆ ಸಿಪ್ಪೆಗಳನ್ನು ಕುಂಚಗಳನ್ನಾಗಿ ಮಾಡಿ ಬಾಗಿಲ ತೋರಣ, ಕೆಡೆಶೇಡಿ, ಕಳಸದ ಶೇಡಿ, ಸರ್ಪಶೇಡಿ, ಪೆಟ್ಟಿಗೆ ಶೇಡಿ, ಹಸಗಾರ, ತಳಕಲಾ ಶೇಡಿ, ಬಾಸಿಂಗ ಹೀಗೆ ನಾನಾ ಬಗೆಯ ಚಿತ್ತಾರಗಳನ್ನು ಸೃಷ್ಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಸಾವಿರಕ್ಕೂ ಹೆಚ್ಚು ಜಾನಪದ ಗೀತೆಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಖ್ಯಾತ ಜಾನಪದ ವಿದ್ವಾಂಸರಾದ ಡಾ.ಎನ್.ಆರ್.ನಾಯಕ ಮತ್ತು ಡಾ.ಶಾಂತಿ ನಾಯಕ ದಂಪತಿ, ಎಲೆಮರೆಯ ಕಾಯಿಯಂತಿದ್ದ ಹನುಮಜ್ಜಿಯ ಜಾನಪದ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿ ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ಪ್ರಶಸ್ತಿ ಪುರಸ್ಕಾರ 2002ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಜಾನಪದಶ್ರೀ ಗೌರವ ಪುರಸ್ಕಾರ ಮುಡಿಗೇರಿಸಿಕೊಂಡಿದ್ದರು. ಈಶಾನ್ಯ ರಾಜ್ಯ ಮೇಘಾಲಯದ ಶಿಲ್ಲಾಂಗ್‍ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ತೇಜನ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮೊಕ್ಕಲ ಜಾನಪದ ಲೋಕದ ವೈಭವವನ್ನು ಶಕ್ತಿಯುತವಾಗಿ ಹರಡಿದ್ದ ಹನುಮಿ ಗೌಡರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದೇ ವಿಷಾದದ ಸಂಗತಿಯಾಗಿದೆ.