SPECIAL:
ವರದಿ: ಕಿರುಗುಂದ ರಫೀಕ್
ಒಂದು ಆತಂಕಕಾರಿ ಸುದ್ದಿಯೀಗ ಜಗತ್ತಿನೆಲ್ಲಡೆ ಹರಿದಾಡುತ್ತಿದೆ. ಅದೇನೆಂದರೆ, ಭೂಮಿಯ ಹೊರವರ್ತುಲದಲ್ಲಿ ಜು.12ರ ಸೋಮವಾರ ಸೌರ ಬಿರುಗಾಳಿ ಬೀಸಲಿದೆ. ಇದರ ತಾಪಮಾನ ಪ್ರಮಾಣ ಹೆಚ್ಚಾಗಿದ್ದರೆ, ಭೂಮಿಯ ಹೊವರ್ತುಲದ ತಾಪಮಾನ ಹೆಚ್ಚಾಗಿ ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಸೆಟ್ಲೈಟ್ ನೊಂದಿಗೆ, ಜಿಪಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ ಹಾಗೂ ಟಿವಿ ಸಿಗ್ನಲ್ ಗಳಿಗೆ ಅಡ್ಡಿ ಉಂಟಾಗಬಹುದು. ವಿದ್ಯುತ್ ಮಾರ್ಗದ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುವಿಕೆ ಹೆಚ್ಚಬಹುದು, ಅಲ್ಲದೆ ಟ್ರಾನ್ಸ್ಫಾರ್ಮರ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಸೂರ್ಯನ ಅಂಚಿನಿಂದ ಆರಂಭವಾಗುವ ಈ ಸೌರ ಬಿರುಗಾಳಿ ಭೂಮಿಯ ಗುರುತ್ವಾರ್ಷಣೆ ಕ್ಷೇತ್ರದ ಪ್ರಭಾವಕ್ಕೆ ಸೆಳೆದು ಭೂಮಿಯ ಹೊರವಲಯದಲ್ಲಿ ಸುಮಾರು 16 ಲಕ್ಷ ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಸ್ಪೇಸ್ ವೆದರ್ ಡಾಟ್ ಕಾಮ್ ಹೇಳಿದೆ.
ಇಂತಹ ಅಪರೂಪದ ಸೌರವಿದ್ಯಮಾನದ ದೃಶ್ಯ ಭೂಮಿಯ ಉತ್ತರ ಅಥವಾ ದಕ್ಷಿಣ ಧ್ರುವದ ದೇಶಗಳಲ್ಲಿ ಗೋಚರವಾಗಲಿದೆ. ಆ ದಿಕ್ಕಿನ ದೇಶಗಳಲ್ಲಿ ರಾತ್ರಿವೇಳೆ ಆಕಾಶದತ್ತ ನೋಡಿದರೆ ರುದ್ರರಮಣೀಯ ದೃಶ್ಯ ಕಾಣಬಹುದು. ಈ ಸೌರ ಬಿರುಗಾಳಿಯು 16 ಲಕ್ಷ ಕಿ.ಮೀ. ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ. ಇದರ ವೇಗ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪರಿಣಾಮ ಉಪಗ್ರಹಗಳ ಸಿಗ್ನಲ್ ಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ನಾಸಾ ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸೌರ ಬಿರುಗಾಳಿ ಹೊಡೆತ ಹೆಚ್ಚಾದರೆ ತಂತ್ರಜ್ಞಾನದ ಬಳಕೆಗೆ ಅಲ್ಪ ಅಡಚಣೆ ಉಂಟಾಗಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಸೂರ್ಯನ ಮೇಲ್ಮೈನ ಮೂರು ಕಡೆ ಬೃಹದಾಕಾರದ ರಂಧ್ರಗಳು ಉಂಟಾಗಿದೆ. ಹೀಗಾಗಿ ಇಲ್ಲಿಂದ ಹೊರಹೊಮ್ಮುವ ಪ್ರಬಲ ಸೌರ ಬಿರುಗಾಳಿಯ ಭೂಮಿಯ ವಾತಾವರಣದತ್ತ ಧಾವಿಸುವ ಸಾಧ್ಯತೆಯಿದೆ ನಾಸಾ ತಿಳಿಸಿದೆ.
ಸೌರ ಬಿರುಗಾಳಿಯ ಪ್ರಮಾಣವನ್ನು ಆಧರಿಸಿ ಜಿ1, ಜಿ2, ಜಿ3, ಜಿ4, ಮತ್ತು ಜಿ5 ಎಂಬ ವರ್ಗೀಕರಣ ಮಾಡಲಾಗಿದೆ. ಈ ಪೈಕಿ ಜಿ1 ಕಡಿಮೆ ತೀವ್ರತೆ ಹೊಂದಿದ್ದರೆ, ಜಿ5 ಅತೀ ಹೆಚ್ಚಿನ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುತ್ತದೆ.