SPECIAL:
ಹೈದರಾಬಾದ್: ಕೋವಿಡ್ ಲಾಕ್ಡೌನ್ ಸಡಿಲಿಸಿದ ನಂತರ ದೇಶದಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ತಲುಪುತ್ತಿದೆ ಎನ್ನುವಷ್ಟರಲ್ಲಿ ಮತ್ತೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಕೋವಿಡ್ ಮೂರನೇ ಅಲೆ ಜು.4ರಂದು ಆರಂಭವಾಗಿದೆ ಎಂದು ಹಿರಿಯ ಭೌತ ವಿಜ್ಞಾನಿ ಮತ್ತು ಹೈದರಾಬಾದ್ ವಿವಿ ಹಂಗಾಮಿ ಕುಲಪತಿ ಡಾ.ವಿಪಿನ್ ಶ್ರೀವಾಸ್ತವ ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಈವರೆಗೆ ಕೊರೋನಾ ಪ್ರಕರಣಗಳ ಅಂಕಿ ಅಂಶವನ್ನು 463 ದಿನಗಳಿಂದ ಪರಿಶೀಲಿಸುತ್ತ, ವಿಶ್ಲೇಷಣೆ ನಡೆಸುತ್ತಾ ಬಂದಿರುವ ಅವರು, ಪೆಬ್ರವರಿಯಲ್ಲಿ ಕೋವಿಡ್ 2ನೇ ಅಲೆ ಪ್ರಾರಂಭದ ದಿನಗಳ ಚಿತ್ರಣಕ್ಕೆ ಸರಿಸಮನಾದ ಚಿತ್ರಣ ಜು.4ಕ್ಕೆ ಕಾಣಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಸಾವಿನ ಸಂಖ್ಯೆ 100ಕ್ಕಿಂತ ಕಡಿಮೆಯಾದಾಗ, ಕೊರೋನಾ ನಿಯಂತ್ರಣವಾಯಿತೆಂದು ಜನರು ನಿಟ್ಟುಸಿರು ಬಿಡುವಂತಾಯಿತು. ಆದರೆ ನಂತರದಲ್ಲಿ ಮೂರನೇ ಅಲೆ ಪ್ರಾರಂಭವಾಗಿ ವೇಗವಾಗಿ ವ್ಯಾಪಿಸಿತು. ಇಂಥದ್ದೇ ಚಿತ್ರಣ ಜು.4ರ ನಂತರದಲ್ಲಿ ಕಂಡುಬಂದಿದ್ದು, ಇದರಿಂದ ಮೂರನೇ ಅಲೆ ಪ್ರಾರಂಭವಾಗಿರುವುದನ್ನು ಗಮನಿಸಬಹುದು ಎಂದಿದ್ದಾರೆ.
ದೇಶದಲ್ಲಿ ಜು.12ರಂದು 37154 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಂದೇ ದಿನ 724 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 30874376ಕ್ಕೇರಿದ್ದರೆ ಮೃತರ ಸಂಖ್ಯೆ 408764 ಏರಿಕೆಯಾಗಿದೆ. ಸರ್ಕಾರ ಹೊಸ ಅಲೆಯ ಆರಂಭವನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಾರ್ಯಗತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.