SPECIAL:
ಜೂನ್ 23 ವಿಶ್ವ ಟೈಪರೈಟರ್ ದಿನ. ಇವತ್ತು ಟೈಪರೈಟರ್ ಒಂದು ನೆನಪು ಎನ್ನುವಷ್ಟು ದೂರ. ಆದರೆ ಆ ನೆನಪು ಆಧುನಿಕತೆಯ ನಡುವೆಯೂ ಕೇಳಿಸುವ ಒಂದು ಮಧುರ ಸದ್ದಿನಂತೆ. ಟೈಪರೈಟರ್ ನೆಪದಲ್ಲಿ ಬದುಕಿನ ಒಳದನಿಯನ್ನು ಆಲಿಸುವ ಒಂದು ಯತ್ನ ಇಲ್ಲಿ.
ಕಿರುಗುಂದ ರಫೀಕ್ ಹಿಂದೊಂದು ಕಾಲವಿತ್ತು. ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ದಾಖಲೆ ಪತ್ರಗಳ ತಯಾರಿಕೆ, ಕರಾರು ಪತ್ರ, ಪರವಾನಗಿ ಪತ್ರ, ಅರ್ಜಿ, ನೊಟೀಸು, ಪ್ರಕಟಣೆ ಸಹಿತ ಬಹುತೇಕ ಎಲ್ಲಾ ತೆರನಾದ ಪತ್ರವ್ಯವಹಾರಗಳು ಟೈಪ್ ರೈಟರ್ ನಿಂದಲೇ ಆಗುತ್ತಿತ್ತು. ಆಗ ಟೈಪ್ ರೈಟರ್ ಗೆ ಭಾರೀ ಬೇಡಿಕೆಯಿತ್ತು. ತಂತ್ರಜ್ಞಾನ ಮುಂದುವರಿದಂತೆ ಮುದ್ರಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳಾಗಿವೆ. ಏನಿದು ಟೈಪ್‌ರೈಟರ್? ಕೀಲಿಮಣೆ(ಕೀಬೋರ್ಡ್)ಯಲ್ಲಿ ಜೋಡಿಸಿರುವ ಅಕ್ಷರಗಳನ್ನು ಒತ್ತುವಾಗ ಅದೇ ಅಕ್ಷರಗಳ ಅಚ್ಚನ್ನು ಹೊಂದಿದ ಕಬ್ಬಿಣದ ಮೊಳೆಗಳು, ಶಾಯಿಪಟ್ಟಿಯ ಮೇಲೆ ಬಡಿದು ಅದರಡಿಯ ಕಾಗದ ಸುರಳಿಯ ಮೇಲೆ ಅಕ್ಷರಗಳನ್ನು ಮೂಡಿಸುವ (ಬರೆಯುವ) ಸಲಕರಣೆ ಅಥವಾ ಯಂತ್ರವೇ ಟೈಪ್‌ರೈಟರ್ ಅಥವಾ ಬೆರಳಚ್ಚು ಯಂತ್ರ. ಜಗತ್ತಿನಲ್ಲಿ ಬೆರಳಚ್ಚು ಯಂತ್ರವನ್ನು 1714ರಲ್ಲಿ ಪ್ರಥಮ ಬಾರಿಗೆ ಸಿದ್ಧಪಡಿಸಿದ್ದು ಹೆನ್ರಿಮಿಲ್. ನಂತರ 1829ರಲ್ಲಿ ಡೆಟ್ರಾಯಿಟ್ ನ ವಿಲಿಯಮ್ ಬಟ್ ಎಂಬಾತ ಟೈಪೊಗ್ರಾಫರ್ ಯಂತ್ರ ತಯಾರಿಸಿದ. ಬ್ರಿಟೀಷರ ಕಾಲದಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸವೇ ಪ್ರಮುಖವಾಗಿದ್ದರಿಂದ ಇಂಗ್ಲಿಷ್ ಶೀಘ್ರಲಿಪಿ, ಇಂಗ್ಲಿಷ್ ಬೆರಳಚ್ಚು ಯಂತ್ರಗಳೂ ಪ್ರಚಾರಕ್ಕೆ ಬಂದವು. ಇಂಗ್ಲೆಂಡ್, ಅಮೆರಿಕ, ಜಪಾನ್, ಮುಂತಾದ ರಾಷ್ಟ್ರಗಳಿಂದ ಭಾರತಕ್ಕೆ ಯಂತ್ರಗಳು ಲಕ್ಷಗಟ್ಟಲೆ ಆಮದಾದುವು. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ನೂರಾರು ಮಾದರಿಯಲ್ಲಿ ಟೈಪ್‌ರೈಟರ್ ಯಂತ್ರಗಳ ಅಭಿವೃದ್ಧಿಯಾದವು. ಹಾಗೆಯೇ ಮಹಿಳೆಯರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಲಭಿಸಿದವು. ಈಗಲೂ ಬಹಳಷ್ಟು ಮಹಿಳೆಯರು ಬೆರಳಚ್ಚು ವಿದ್ಯೆಯಲ್ಲಿ ಪರಿಣಿತರಿದ್ದಾರೆ. ನ್ಯಾಯಾಲಯಗಳಲ್ಲಿ, ಕೆಲವು ಇಲಾಖೆಗಳಲ್ಲಿ ಕೆಲ ಪತ್ರ ವ್ಯವಹಾರಗಳು ಬೆರಳಚ್ಚು ಕೆಲಸಗಳು ಬೆರಳೆಣಕೆಯಾಗುತ್ತಿವೆ. ದಿನಗಳೆದಂತೆ ವಿನೂತನ ಮಾದರಿಯ ಪ್ರಿಂಟರ್ ಗಳು, ಕಂಪ್ಯೂಟರ್ ನ ಹೊಸ ಹೊಸ ಸಾಫ್ಟ್ವೇರ್ ಗಳ ಅಭಿವೃದ್ಧಿ ಹಾಗೂ ಆನ್ಲೈನ್ ವ್ಯವಹಾರದಿಂದಾಗಿ ಹಿಂದಿನ ಟೈಪ್ ರೈಟರ್ ಗೂ ಈಗಿನ ಮುದ್ರಣ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸಗಳಾಗಿವೆ. ಸ್ಮಾರ್ಟ ಫೋನ್ ಗಳು ಬಂದಮೇಲಂತೂ ಬಹುತೇಕ ಕೆಲಸಗಳೆಲ್ಲಾ ಬೆರಳ ತುದಿಯಲ್ಲೇ ಆಗುತ್ತಿರುವುದರಿಂದ ಟೈಪ್ರೈಟರ್ ಗಳಿಗೆ ಬೇಡಿಕೆ ಕ್ಷೀಣಿಸಿದ್ದು ಇನ್ನುಮುಂದೆ ಟೈಪ್ರೈಟರ್ ಯಂತ್ರಗಳೇ ಕಣ್ಮರೆಯಾಗಲಿದೆ. ಇದರಲ್ಲೇ ಪರಿಣತರಾಗಿ ಉದ್ಯೋಗ ಕಂಡುಕೊಂಡವರು ಇನ್ನುಮುಂದೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಕನ್ನಡ ಟೈಪ್‌ರೈಟರ್ ಕನ್ನಡ ಬೆರಳಚ್ಚು ಯಂತ್ರ 1933ರಲ್ಲಿ ತಯಾರಾಗಿತ್ತು. ನಂತರ ಅನೇಕ ಬಾರಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗಿತ್ತು. ಆದರೆ ಸುಧಾರಣೆ ಕಾಣದೆ ನನೆಗುದಿಗೆ ಬಿದ್ದಿತ್ತು. ಸ್ವಾತಂತ್ರ್ಯನಂತರ ಕನ್ನಡದ ಕೆಲವು ಬೆರಳಚ್ಚು ಯಂತ್ರಗಳನ್ನು ಪರಿಶೀಲಿಸಿ 1958ರಲ್ಲಿ ಅನಂತಸುಬ್ಬರಾಯರು ನಿರ್ಮಿಸಿದ ಕನ್ನಡ ಬೆರಳಚ್ಚು ಮಾದರಿಯನ್ನು ಅಂದಿನ ಸರ್ಕಾರ ಅಂಗೀಕರಿಸಿತು. ಸ್ವೀಡನ್ನಿನ ಹಾಲ್ಡಾ ಕಂಪನಿ ತಯಾರಿಸಿದ ಮೊದಲ ಕನ್ನಡ ಬೆರಳಚ್ಚು ಯಂತ್ರ 1961ರಲ್ಲಿ ಚಾಲನೆಗೆ ಬಂತು. 1956ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದ ಬಳಿಕ ಭಾರತದ ಎಲ್ಲ ರಾಜ್ಯಗಳ ಭಾಷೆಗಳಿಗೂ ಬೆರಳಚ್ಚು ಯಂತ್ರಗಳು ಬೇಗನೆ ತಯಾರಾದವು. ಆದರೆ ಕನ್ನಡದ ಯಂತ್ರ ಬರಲು ತಡವಾಯಿತು. ಭಾರತದಲ್ಲಿ ಎಲ್ಲಿಯೂ ನಡೆಯದಿದ್ದ ಲಿಪಿ ಬದಲಾವಣೆಯ ಹೋರಾಟವು ಸತತ 30 ವರ್ಷ ನಡೆದಿದ್ದೇ ಇದಕ್ಕೆ ಕಾರಣ.