SPECIAL:
ವರದಿ : ಕಿರುಗುಂದ ರಫೀಕ್
ಚಿಕ್ಕಮಗಳೂರು: ಮುಂಗಾರು ಆರಂಭವಾಗುತ್ತಿದ್ದಂತೆ ಪಶ್ಚಿಮಘಟ್ಟಗಳ ಸಾಲಿನ ಗುಡ್ಡಗಾಡುಗಳಲ್ಲಿ ಜಲಧಾರೆಗಳು ಮೈದುಂಬಿ ಹರಿಯತೊಡಗಿವೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಕಣಿವೆ ಅಸಂಖ್ಯಾತ ಜಲಧಾರೆಗಳ ಕಣಿವೆಯಾಗಿದ್ದು ಇಲ್ಲಿ ಪುಟ್ಟ ಪುಟ್ಟ ಝರಿ, ಜಲಪಾತಗಳು ಕಣ್ಮನ ಸೆಳೆಯುತ್ತಿವೆ.
ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಬತ್ತಿಹೋಗುವ ಬಂಡೆಗಳನ್ನು, ಒಣಮರಗಳನ್ನು ನೋಡುವವರಿಗೆ ಈ ಹೊತ್ತಿನಲ್ಲಿ ಹಚ್ಚ ಹಸಿರಿನ ನಡುವೆ ಜಲಧಾರೆಗಳ ನೋಡುವ ಭಾಗ್ಯವಿದೆ. ಪ್ರವಾಸಿಗರನ್ನು ಆಕರ್ಷಿಸುವ ಸ್ವರ್ಗದಂತಹ ವಾತಾವರಣ ಏರ್ಪಟ್ಟಿದೆ.
ಎತ್ತರದ ಬೆಟ್ಟಗಳು, ಪಾತಾಳದಂತಹ ಪ್ರಪಾತ, ದಟ್ಟವಾದ ಕಾಡು, ವನ್ಯಮೃಗಗಳು, ಶೋಲಾ, ಹುಲ್ಲುಗಾವಲು, ಅಪಾರ ಸಸ್ಯಸಂಪತ್ತು ಹೊಂದಿರುವ ಚಾರ್ಮಾಡಿ ಕಣಿವೆ ಹಚ್ಚ ಹಸುರಿನಿಂದ ಕಂಗೊಳಿಸತೊಡಗಿದೆ. ಪ್ರಕೃತಿ ವೈಭವ ತುಂಬಿಕೊಂಡಿದೆ. ಈ ಕಣಿವೆಯಲ್ಲಿ ಜೇನುಕಲ್ಲು ಜಲಪಾತ, ಅಲೇಖಾನ್, ಕಲ್ಲರ್ಬಿ, ಬಂಡಾಜೆ, ಆನಡ್ಕ, ಹಕ್ಕಿಕಲ್ಲು ಎಂಬ ಹೆಸರಿನ ಜಲಪಾತಗಳಿವೆ, ಕೊಡೆಕಲ್ಲು, ಬಾಳೆಕಲ್ಲು, ಜೇನುಕಲ್ಲು, ದೀಪದಕಲ್ಲು, ಶಿಶಿಲ, ಎತ್ತಿನ ಭುಜ ಮುಂತಾದ ಬೆಟ್ಟಗಳನ್ನು ಕಾಣಬಹುದು.
ಮಳೆ ಹೆಚ್ಚಾದರೆ ನರಕ!
ದಟ್ಟವಾಗಿ ಮಂಜು ಆವರಿಸಿದಂತೆ ರಸ್ತೆಗಳೇ ಕಾಣದಂತಾಗುವುದು ಪ್ರತೀ ವರ್ಷದ ಮಳೆ ಅವಧಿಯಲ್ಲಿ ಸಾಮಾನ್ಯ ಸಂಗತಿಯಾದರೆ. ಮಳೆ ವೈಪರೀತ್ಯ ಉಂಟಾಗಿ ಅನಾಹುತಗಳು ಸಂಭವಿಸುವಾಗ ಇಲ್ಲಿ ಇದಕ್ಕಿಂತ ದೊಡ್ಡ ನರಕವಿದೆಯೇ ಎಂಬಂತಾಗುತ್ತೆ. ರಸ್ತೆ ಮೂಲಕ ಸಂಚರಿಸುವ ಕೆಲವು ಪ್ರವಾಸಿಗರು ನೀರು ಹರಿಯುವ ಬಂಡೆಗಳನ್ನು ಏರಿ ಕುಣಿದು ಕುಪ್ಪಳಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ.
ಸೆಲ್ಫಿ ತೆಗೆಯುವ ಭರದಲ್ಲಿ ಮೇಲಿನಿಂದ ಜಾರಿಬಿದ್ದು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಯಿದೆ. ಇಲ್ಲಿ ಹಾದುಹೋಗುವ ರಸ್ತೆಯು 11 ಹಿಮ್ಮುರಿ ತಿರುವುಗಳನ್ನು ಹೊಂದಿದೆ. ಧಾರಾಕಾರ ಮಳೆ ಸುರಿಯುವಾಗ ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಲೇ ಇರುತ್ತವೆ. ಆಗ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸದ ಕೆಲಸವಾಗುತ್ತದೆ. ಅಲ್ಲಲ್ಲಿ ಗುಡ್ಡ ಜರಿದು, ರಸ್ತೆಗಳೇ ಕೆಳಕ್ಕೆ ಕುಸಿಯುವುದು, ಮರಗಳು ರಸ್ತೆಗೆ ಉರುಳುವುದರಿಂದ ವಾಹನದಲ್ಲಿ ಸಂಚರಿಸುವವರಿಗೆ ಅಡ್ಡಿ ಆತಂಕಗಳೇ ಹೆಚ್ಚು. ಅನಾಹುತಗಳು ಸಂಭವಿಸಿದಾಗ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ, ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲಾಗುತ್ತದೆ.