SPECIAL:
ತೇಜಸ್ವಿ ಬಿ.ನಾಯ್ಕ
ಎಲ್ಲಿ ನೋಡಿದ್ರಲ್ಲಿ ಜುಳು ಜುಳು ನೀರು ಹರಿಯುವ ಶಬ್ದ…ಜಲಪಾತಗಳ ತವರೂರಲ್ಲಿ ಈಗ ಜಲಪಾತಗಳ ಕಲರವ…ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿದೆ ಜಲಪಾತಗಳ ವೈಭವ…ಹಾಲನೊರೆಯಂತೆ ಕಂಗೊಳಿಸುತ್ತಿವೆ ಜಲಪಾತ ಗಳು…ಹಿಂಡು ಹಿಂಡಾಗಿ ಜಲಪಾತಗಳ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು…
ಮಳೆಗಾಲ ಬಂತೆಂದ್ರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಜಲಪಾತಗಳ ಕಲರವ ಶುರುವಾಗುತ್ತದೆ.ಪ್ರಕೃತಿಯೇ ಸೃಷ್ಟಿ ಮಾಡಿದ ಅದೆಷ್ಟೋ ಜಲಪಾತಗಳು ಇಂದು ಪ್ರವಾಸಿಗರ ಭವ್ಯ ತಾಣ. ಒಂದೋ ಎರಡೋ ಅಯ್ಯೋ, ಒಂದೊಂದು ಬಗೆಯ ಒಂದೊಂದು ಹೆಸರಿನ ಜಲಪಾತ ಇಲ್ಲಿವೆ.
ಒಂದು ಕಡೆ ಕರಾವಳಿಯಲ್ಲಿ ಕಾಳಿ ನದಿ ಸೃಷ್ಟಿ ಮಾಡಿರುವ ಹತ್ತಾರು ಜಲಪಾತಗಳು. ಇನ್ನೊಂದೆಡೆ ಅಘನಾಶಿನಿ,ಗಂಗಾವಳಿ ನದಿ ಸೃಷ್ಟಿ ಮಾಡಿರುವ ಒಂದಿಷ್ಟು ಮಳೆಗಾಲದಲ್ಲಿ ಹುಟ್ಟುವ ಜಲಪಾತಗಳು. ಹಾಗೆ ಮಲೆನಾಡಿಗೆ ಕಾಲಿಟ್ರೆ ಬೇಡ್ತಿ ನದಿ ಸೃಷ್ಟಿ ಮಾಡಿರುವ ಹೆಸರಾಂತ ಸಾತೊಡ್ಡಿ ಹಾಗೂ ಮಾಗೋಡು ಜಲಪಾತ.
ಅಯ್ಯೋ… ಒಂದೋ, ಎರಡೋ ಜಲಪಾತಗಳ ತವರೂ, ಜೊತೆಗೆ ಪ್ರಾಕೃತಿಕ ಸೌಂದರ್ಯದ ಕಣಜ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳಿಗೇನು ಕಮ್ಮಿ ಇಲ್ಲ.ಒಂದೊಂದು ಜಲಪಾತಗಳು ಇಂದು ತನ್ನದೇ ಆದ ಹೆಸರಿನಲ್ಲಿ ಪ್ರವಾಸಿಗರನ್ನು ತನ್ನ ಮಡಿಲ ಸೇರಿಸಿಕೊಳ್ಳುತ್ತಿದೆ.
ಜಿಲ್ಲೆಯ ಪ್ರಸಿದ್ದ ಜಲಪಾತಗಳಲ್ಲೊಂದಾದ ಸಾತೊಡ್ಡಿ ಜಲಪಾತವನ್ನು ಒಮ್ಮೆ ನೋಡಿದ್ರೆ ಮತ್ತೊಮ್ಮೆ ಮತ್ತೊಮ್ಮೆ ನೋಡಿದ್ರೆ ಮಗದೊಮ್ಮೆ ಅಂತಾ ಮನಸ್ಸಿಗೆ ಪೀಲ್ ಆಗೋದ್ರಲ್ಲಿ ಡೌಟೆ ಇಲ್ಲ. ಅದು ಹಚ್ಚ ಹಸುರಿನ ಕಾನನದ ಕಲ್ಬಂಡೆಗಳೊಂದಿಗೆ ಹೋರಾಡುತ್ತ, ನೀರನಾರಿಯ ಕೂಸುಗಳೆಲ್ಲವನ್ನು ಬಾಚಿಕೊಂಡು ಭೂಮಿಗಪ್ಪಳಿಸಿ ಮುತ್ತಿಕ್ಕುತ್ತಲಿರುವಂತೆ ಭಾಸವಾಗುತ್ತದೆ. ಅಲ್ಲಿ ಕಾಮನ ಬಿಲ್ಲಿನ ಉಡುಗೊರೆಯನ್ನೊತ್ತಿ ತುಂತುರು ಹನಿಗಳ ನಡುವೆ ಉದಯಿಸುವ ಸೂರ್ಯನ ಕಿರಣಗಳಿಗೆ, ಜಲಧಾರೆ ಶೃಂಗಾರ ಮೆರೆಯುತ್ತಲಿದೆ. ಒಂದೊಮ್ಮೆ ತಂಪಾದ ವಾತಾವರಣದ ಮಧ್ಯೆ ಪ್ರಕೃತಿ ಸೌಂದರ್ಯದ ಸೊಬಗನ್ನ ಸವಿಯೋದು ಕಣ್ಣಿಗೆ ಹಬ್ಬ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಜಲಪಾತಗಳಲ್ಲೊಂದಾದ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತ. ಈ ಬಾರಿ ಸಾತೊಡ್ಡಿ ಜಲಪಾತ ಮೈತುಂಬಿ ದುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಪ್ರಕೃತಿ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಇತ್ತೀಚೆಗೆ ಸಾತೊಡ್ಡಿ ಜಲಪಾತಕ್ಕೆ ಬರೋ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ.
ಸಾತೊಡ್ಡಿ ಜಲಪಾತ ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಬೋರ್ಗರೆಯುವ ಜಲಪಾತ. ಮಳೆಗಾಲದಲ್ಲಿ ನೀರಿನ ಆರ್ಭಟ ಹೆಚ್ಚಾಗಿದ್ರಿಂದ ಪ್ರವಾಸಿಗರಿಗೆ ಹಬ್ಬ. ಜಲಪಾತಗಳನ್ನ ಹೆಣ್ಣಿನ ಸೌಂದರ್ಯಕ್ಕೆ ಹೋಲಿಸಿ, ವರ್ಣಿಸಿ ಬರೆಯುತ್ತಾರೆ.ಅಂಥ ಜಲಪಾತಗಳಲ್ಲಿ ಸಾತೊಡ್ಡಿ ಸುಂದರಿಯೂ ಕೂಡಾ ಒಂದು. ಸಾತೊಡ್ಡಿ ಜಲಪಾತದ ಸೊಬಗನ್ನು ಸವಿಯಲು ಕೇವಲ ಜಿಲ್ಲೆಯಿಂದಷ್ಟೆ ಅಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಿ ಅದರ ಸೌಂದರ್ಯ ಸವಿದು ಹೋಗ್ತಾರೆ.
ಜಲಪಾತಗಳ ತವರೂರಲ್ಲಿ ಇನ್ನಷ್ಟು ಸುಂದರ ಜಲಪಾತಗಳು ಇವೆ.ಮಳೆಗಾಲದಲ್ಲಿ ಹುಟ್ಟಿ ಕಡಿಮೆ ಅವಧಿಯಲ್ಲೇ ಪ್ರವಾಸಿಗರನ್ನು ಆಕರ್ಷಿಸಿ ಪ್ರಸಿದ್ದಿ ಪಡೆದ ಜಲಪಾತಗಳಲ್ಲಿ ಈಗ ಪ್ರವಾಸಿಗರ ದಂಡು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಗಾಲದಲ್ಲಿ ಹುಟ್ಟಿ ನಾಲ್ಕೈದು ತಿಂಗಳು ಪ್ರವಾಸಿಗರನ್ನ ಹಿಡಿದಿಟ್ಟು ರಸದೌತಣ ನೀಡುವ ಪ್ರಕೃತಿ ಸೃಷ್ಟಿಯ ಜಲಪಾತಗಳು ಕಾರವಾರದ ಸುತ್ತಮುತ್ತ ನೋಡ ಸಿಗುತ್ತದೆ. ಈ ಪೈಕಿ ನಿಮಗೆ ಒಂದೆ ಸೂರಿನಡಿಯಲ್ಲಿ ನಾಲ್ಕೈದು ಜಲಪಾತಗಳು ಇಂದಿಗೆ ಪ್ರವಾಸಿಗರ ಮೋಜು ಮಸ್ತಿಗೆ ಹೆಸರಾಗಿದೆ. ಕಾರವಾರದ ನಾಗರಮಡಿ ಜಲಪಾತ, ಅಣಶಿ ವಜ್ರ ಜಲಪಾತ , ಗೋಲಾರಿ ಜಲಪಾತ, ಜಲಪಾತಗಳನ್ನು ಹೀಗೆ ಎಣಿಸಿದ್ರೆ ಎಣಿಸಲಾಗದಷ್ಟು ಜಲಪಾತಗಳು ಜೀವಕಳೆ ತುಂಬಿಕೊಂಡು ಸೌಂದರ್ಯವನ್ನ ಹೊತ್ತು ನಿಂತಿವೆ.
ಹಸಿರು ಕಾನನದ ದಟ್ಟಾರಣ್ಯದಲ್ಲಿ ಕಲ್ಬಂಡೆಯನ್ನು ಸೀಳುವಂತೆ ದೋದೋ… ಎಂದು ದುಮ್ಮಿಕ್ಕುವ ಜಲಧಾರೆ.ಪಕ್ಕದಲ್ಲೇ ಬೀಳುವ ನೀರಿನಲ್ಲಿ ಮಸ್ತ್ ಮಜಾ ಮಾಡ್ತೀರೋ ಪ್ರವಾಸಿಗರು. ಕೆಲವರು ಜಲಪಾತಗಳನ್ನ ನೋಡಿ ಖುಷಿ ಪಟ್ರೆ ಇನ್ನು ಕೆಲವರು ಹಾಲ್ನೊರೆಯಂತ ಜಲಧಾರೆಗೆ ಮೈಯೊಡ್ಡಿ ಖುಷಿಪಡುವ ದೃಶ್ಯ… ಇವೆಲ್ಲಾ ಅಪರೂಪದ ದೃಶ್ಯ ಕಂಡುಬರೋದು ಈ ಕರ್ನಾಟಕದ ಕಾಶ್ಮೀರ ಕಾರವಾರ ತಾಲೂಕಿನ ಸುತ್ತಮುತ್ತಲಿರುವ ಗೋಲಾರಿ, ನಾಗರಮಡಿ,ಅಣಶಿ ವಜ್ರ ಜಲಪಾತಗಳಲ್ಲಿ. ಇವೆಲ್ಲಾ ಜಲಪಾತಗಳು ಇಂದು ಅದೆಷ್ಟೋ ಲಕ್ಷಾಂತರ ಪ್ರವಾಸಿಗರನ್ನ ತನ್ನತ್ತ ಸೆಳೆದುಕೊಂಡು ಪ್ರವಾಸಿಗರ ಕಣ್ಣಿಗೆ ಮುದ ನೀಡ್ತಿದೆ. ಕಾರವಾರ ತಾಲೂಕಿನ ಕದ್ರಾದ ಬಳಿ ಇರುವ ವಜ್ರದ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹೆದ್ದಾರಿಗೆ ತಗುಲಿಕೊಂಡೇ ಇರುವ ಈ ಜಲಪಾತವನ್ನು ನೋಡಲು ಪ್ರವಾಸಿಗರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಮದ್ಯಾಹ್ನದ ಬಿಸಿಲಿನ ಕಿರಣಗಳಿಗೆ ಈ ಜಲಪಾತವು ವಜ್ರದಂತೆ ಹೊಳೆಯುವುದರಿಂದ ಈ ಜಲಪಾತಕ್ಕೆ ವಜ್ರ ಜಲಪಾತವೆಂದು ಕರೆಯುತ್ತಾರೆ.
ಹೀಗೆ ನೋಡುತ್ತಾ ಹೋದ್ರೆ ಜಿಲ್ಲೆಯಲ್ಲಿ ಇನ್ನಷ್ಟು ಜಲಪಾತಗಳು ಕಾಣಸಿಗುತ್ತದೆ. ಒಂದೆಡೆ ಶಾಶ್ವತ ಜಲಪಾತಗಳು ಪ್ರವಾಸಿಗರಿಗೆ ಮುದ ನೀಡಿದ್ರೆ ಇನ್ನೊಂದೆಡೆ ಮಳೆಗಾಲದಲ್ಲಿ ಪ್ರಕೃತಿ ಸೃಷ್ಟಿಸಿದ ಜಲಪಾತಗಳು ಪ್ರವಾಸಿಗರ ಕಣ್ಣಿಗೆ ಹಬ್ಬ. ಜಲಪಾತ ಅಂದ್ರೆ ಉತ್ತರ ಕನ್ನಡ ಕನ್ನಡ, ಉತ್ತರ ಕನ್ನಡ ಅಂದ್ರೆ ಜಲಪಾತ. ಈ ಸಮಯದಲ್ಲಿ ಪ್ರವಾಸಿಗರು ಕೇವಲ ಜಲಪಾತಗಳ ವೀಕ್ಷಣೆಗಂತಾನೆ ಜಿಲ್ಲೆಗೆ ಬರ್ತಾರೆ. ಹಾಗೆ ಇನ್ನು ಎರಡು ಜಲಪಾತಗಳು ಪ್ರವಾಸಿಗರನ್ನ ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಿದೆ. ಅದ್ರಲ್ಲೆ ಒಂದಿಷ್ಟು ಡಿಫ್ರೆಂಟ್ ಜಲಪಾತಗಳು ಕೂಡಾ ಇಲ್ಲಿ ಪ್ರವಾಸಿಗರಿಗೆ ಸ್ವರ್ಗ ಎನಿಸಿಕೊಂಡಿದೆ. ಅದ್ರಲ್ಲಿ ಮಾಗೋಡು ಜಲಪಾತ ಕೂಡಾ ಒಂದು.ಯಲ್ಲಾಪುರ ತಾಲೂಕಿನಲ್ಲಿರುವ ಈ ಜಲಪಾತಕ್ಕೆ ಈಗ ಪ್ರವಾಸಿಗರೋ ಪ್ರವಾಸಿಗರು.
ಹಸಿರು ಕಾನನದ ದಟ್ಟಾರಣ್ಯದಲ್ಲಿ ಕಲ್ಬಂಡೆಯನ್ನು ಸೀಳುವಂತೆ ಭಾಸವಾಗಿರುವಂತೆ ಧರೆಗೆ ದುಮ್ಮಿಕ್ಕುವ ಜಲಧಾರೆ. ಹಾಲ್ನೊರೆಯನ್ನೆ ಧರೆಗೆ ತಂದೊಯ್ಯುವಂತೆ ಕಾಣುವ ಜಲಧಾರೆಯ ದುಮ್ಮಿಕ್ಕುವಿಕೆ. ಇನ್ನೊಂದೆಡೆ ಜಲಧಾರೆಯನ್ನು ಮರೆಯಾಗಿಸಿ ನೋಡುಗರ ಕಣ್ಮನ ಸೆಳೆಯುವ ಮೋಡದ ಛಾಯೆಗಳು. ಮುಂಜಾನೆಯೋ ಮುಸ್ಸಂಜೆಯೋ ಎಂದು ಭಾಸವಾಗೋ ಸೂಪರ್ ವಾತಾವರಣ. ಇವೆಲ್ಲಾ ಪ್ರಕೃತಿ ಸೌಂದರ್ಯ ಸವಿಬೇಕು ಅಂದ್ರೆ ಈ ಜಲಪಾತದ ಸುತ್ತ ಒಂದು ಸುತ್ತು ಹೊಡಿಲೇಬೇಕು. ಇಂಥ ಸೌಂದರ್ಯದ ಕಿರೀಟವನ್ನು ಹೊತ್ತಿರುವ ಮಾಗೋಡು ಜಲಪಾತ ಕೇವಲ ಕಣ್ಮನ ತಂಪುಗೊಳಿಸಿಕೊಳ್ಳೋದು ಮಾತ್ರ. ಜಲಧಾರೆಗೆ ಮೈಯೊಡ್ಡಲು ಸಾಧ್ಯವಾಗದೆ ಜಲಧಾರೆಯ ಸೌಂದರ್ಯಕ್ಕೆ ಮಾರಿ ಹೋಗ್ತಿದ್ದಾರೆ ಪ್ರವಾಸಿಗರು.
ಇಂಥ ಜಲಪಾತಗಳು ಎಷ್ಟು ಸಂದರವೋ ಅಷ್ಟೇ ಡೇಂಜರ್ಸ್ ಕೂಡಾ.ಮಳೆಗಾಲ ದಲ್ಲಿ ಪ್ರಕೃತಿ ಸೃಷ್ಟಿಸುವ ಜಲಪಾತ ಈಗ ಪ್ರವಾಸಿಗರಿಗೆ ಸೂಪರ್. ಅಂಥ ವಿಶೇಷತೆ ಜೊತೆಗೆ ಅಷ್ಟು ಸೌಂದರ್ಯವನ್ನ ಹೊತ್ತಿರುವ ಜಲಪಾತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ. ಒಟ್ಟಾರೆ ಜಲಪಾತಗಳ ತವರು ನೈಸರ್ಗಿಕ ಸೌಂದರ್ಯದ ಕಣಜ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳು ಹೇಗೆ ಹುಟ್ಟಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಅಂತಾ. ಇಂತಹ ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗದ ಪ್ರವಾಸಿಗನೇ ಇಲ್ಲ.
ಒಂದಷ್ಟು ಸಮಸ್ಯೆಗಳ ಮಧ್ಯೆ ಚಾರಣ ಪ್ರಿಯರಿಗೆ ರಾಜ್ಯದ ಬೇರೆಲ್ಲಾ ಜಲಪಾತ ಗಳಿಗಿಂತ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳು ಮತ್ತೊಂದಿಷ್ಟು ಹೆಚ್ಚು ಮುದ ನೀಡಬಹುದು