SPECIAL:
ಕಾರವಾರ : ಕೋವಿಡ್ ನಿಯಮದ ಜೊತೆ ಲಾಕ್ ಡೌನ್ ಪರಿಣಾಮ ಇಷ್ಟು ದಿನ ಮನೆಯಲ್ಲಿ ಬಂಧಿಯಾಗಿದ್ದವರು ಅನ್ ಲಾಕ್ ಆದ ಬಳಿಕ ಕುಟುಂಬ ಸಮೇತ ಪ್ರಸಾಸಿ ಸ್ಥಳದತ್ತ ಮುಖ ಮಾಡುತ್ತಿದ್ದಾರೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರೇಮಿಗಳು ವಾರದ ರಜೆಯ ಬಿಡುವು ಕಳೆಯಲು ಪ್ರೇಕ್ಷಣಿಯ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಶನಿವಾರ ಮುಂಜಾನೆಯಿಂದಲೇ ಇಲ್ಲಿನ ಕಡಲ ತೀರಗಳಲ್ಲಿ ಜನರ ಜಾತ್ರೆ ನೆರೆದಿದೆ. ಓಂ, ಕುಡ್ಲೆ , ಮುಖ್ಯ ಕಡಲ ತೀರಗಳಲ್ಲಿರುವ ರೆಸಾರ್ಟ್, ಹೊಟೇಲ್‌ಗಳು ಭರ್ತಿಯಾಗಿವೆ.
ಕಡಲ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು ನೀರಿನಲ್ಲಿ ಈಜಾಡಲು ತೆರಳಿ, ಆಟವಾಡುತ್ತಾ ಮೈಮರೆಯುತ್ತಿದ್ದಾರೆ. ಇವರಿಗೆ ತಿಳುವಳಿಕೆ ನೀಡಲು ಲೈಫ್ ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೇವಲ ಒಂದೆ ಜೀವರಕ್ಷಕ ಸಿಬ್ಬಂದಿಯನ್ನು ಮುಖ್ಯ ಕಡಲತೀರದಲ್ಲಿ ನೇಮಿಸಿದ್ದು, ಒಂದು ಕಿ.ಮೀ. ಗೂ ಅಧಿಕ ದೂರದ ತೀರದಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.ಜೊತೆಯಲ್ಲಿ ಇನ್ನಿಬ್ಬರು ಸಿಬ್ಬಂದಿಯನ್ನಾದರೂ ನೇಮಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಕೋವಿಡ್ ನಿಯಮ ಪಾಲನೆ ಇಲ್ಲ
ಇನ್ನು ರಾಜ್ಯದ ವಿವಿಧೆಡೆ ಸೇರಿದಂತೆ ಹೊರ ರಾಜ್ಯದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಬಿಂದಾಸ್ ಓಡಾಟ ಜೋರಾಗಿದೆ. ಇನ್ನು ಕೆಲವು ರಾಜ್ಯಗಳಿಗೆ ತೆರಳಬೇಕೆಂದರೆ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಆದರೆ ನಮ್ಮಲ್ಲಿ ಬರಲು ಯಾವುದೇ ನಿಯಮ ಅನ್ವಯವಾಗುತ್ತಿಲ್ಲ ಎನ್ನಲಾಗಿದ್ದು, ಈ ಭಾಗದಲ್ಲಿ ಇಲ್ಲಿಯವರೆಗೆ ನಿಯಂತ್ರಣದಲ್ಲಿದ್ದ ಕೊರೋನಾ ಸೋಂಕು ಮತ್ತೆ ಹೆಚ್ಚಾಗುವ ಕುರಿತು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲನೆ ಆಗಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಾರ್ಕಿಂಗ್ ಸಂಚಾರ ದಟ್ಟಣೆ ಮಾಮೂಲಿನಂತಿದೆ. ಈ ಮೊದಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ವೇಳೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ಮುಂದುವರಿದಿದೆ. ಕೋವಿಡ್ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಈಗ ಸಂಚಾರ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.
ಬಹು ದಿನಗಳ ನಂತರ ಹೊರಗಡೆ ಬಂದ ಜನರು ಮೊಬೈಲ್ ನಲ್ಲಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾ ಸಂಭ್ರಮಿಸುತ್ತಿದ್ದಾರೆ. ಸೆಲ್ಪಿ ತೆಗೆದು ಕುಣಿದು ಕುಪ್ಪಳಿಸುವ ದೃಶ್ಯ ಸಾಮಾನ್ಯವಾಗಿದೆ.
ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲೂ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಅದರಂತೆ ಮಹಾಗಣಪತಿ ದೇವಾಲಯದಲ್ಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.