SPECIAL:
ಬಾಗಲಕೋಟೆ: ಶಾಲಾವರಣದಲ್ಲಿ ಬೆಳೆದಿದ್ದ ಕಸವನ್ನು ಸ್ವತಃ ಶಾಲೆಯ ಮುಖ್ಯ ಶಿಕ್ಷಕಿ ಟ್ರ್ಯಾಕ್ಟರ್ ಚಲಾಯಿಸಿ, ಶುಚಿಗೊಳಿಸಿರೋ ವಿಡಿಯೋ ಬಾಗಲಕೋಟೆಯಲ್ಲಿ ಸದ್ದು ಮಾಡುತ್ತಿದೆ.
ಹೌದು, ಬಾಗಲಕೋಟೆ ಜಿಲ್ಲೆ ಬಾದಾಮಿ ಬಳಿಯ ಬನಶಂಕರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಪಾರ್ವತಿ ಚಳಗೇರಿ ಟ್ರ್ಯಾಕ್ಟರ್ ರೂಟರ್ ಮೂಲಕ ಶುಚಿಗೊಳಿಸಿದರು. ಸರ್ಕಾರಿ ಶಾಲೆ ಶಿಕ್ಷಕರು ಸರಿಯಾಗಿ ಶಾಲೆಗೆ ಬರೋದಿಲ್ಲ. ಮಕ್ಕಳಿಗೆ ಕಲಿಸೋಲ್ಲ ಎನ್ನುವ ಮಾತುಗಳಿವೆ. ಆದರೆ ಈ ಮುಖ್ಯ ಶಿಕ್ಷಕಿ ತಮ್ಮ ಸ್ವಂತ ಹಣದಲ್ಲಿ ಶಾಲಾಭಿವೃದ್ಧಿ ಮಾಡುತ್ತಿದ್ದಾರೆ.
ಕಸ ಶುಚಿಗೊಳಿಸುವ ವೇಳೆ ಮುಖ್ಯ ಶಿಕ್ಷಕಿಗೆ ಇತರ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಸಾಥ್ ನೀಡಿದ್ದರು. ಬಾಗಲಕೋಟೆ ಜಿಲ್ಲೆಯಲ್ಲೇ ಬನಶಂಕರಿಯಲ್ಲಿರುವ ಸರ್ಕಾರಿ ಶಾಲೆ ಮಾದರಿಯಾಗಿದೆ. ಖಾಸಗಿ ಶಾಲೆಗೆ ಸೆಡ್ಡು ಹೊಡೆದು ಕೂಲಿಕಾರ್ಮಿಕರಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯೊಳಗೆ ಹೋದರೆ ಸಾಕು ಕಣ್ಣು ಹಾಯಿಸಿದೆಲೆಲ್ಲಾ ಹಸಿರು ಪರಿಸರವೇ ಕಾಣುತ್ತೆ. ಅತ್ಯುತ್ತಮ ಪರಿಸರ ಶಾಲೆ ಎಂದು ಪ್ರಶಸ್ತಿ ಕೂಡಾ ಪಡೆದುಕೊಂಡಿದೆ.
ಈ ವರ್ಷ 1ನೇ ತರಗತಿಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಳ್ಳುತ್ತಿದ್ದಾರೆ. ಈ ಶಾಲೆಯಲ್ಲಿ 1 ರಿಂದ 6 ನೇ ತರಗತಿಯವರಿಗೆ 75ಕ್ಕೂ ವಿದ್ಯಾರ್ಥಿಗಳು ಕಲಿತಿದ್ದಾರೆ. 3 ಜನ ಖಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಬಹುತೇಕರು ಕೂಲಿ ಕಾರ್ಮಿಕರ ಮಕ್ಕಳು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಿಂದ ಬನಶಂಕರಿಯಲ್ಲಿ ತೋಟಗಳಲ್ಲಿ ದುಡಿಯಲು ವಲಸೆ ಬಂದಿದ್ದಾರೆ. ಇಲ್ಲಿನ ಮಕ್ಕಳು ವಿಭಿನ್ನ ಸಮವಸ್ತ್ರ,ಶೂ ಧರಿಸಿಯೇ ಶಿಸ್ತಿನಿಂದ ಶಾಲೆಗೆ ಬರ್ತಾರೆ.
ಮೊದಮೊದಲು ಈ ಶಾಲೆ ಎಲ್ಲ ಸರ್ಕಾರಿ ಶಾಲೆಯಂತೆಯೇ ಇತ್ತು. ಈ ಶಾಲೆಗೆ ಮುಖ್ಯಶಿಕ್ಷಕಿಯಾಗಿ ಪಾರ್ವತಿ ಚಳಗೇರಿ ಬಂದ್ಮೇಲೆ ಶಾಲೆಯ ಚಿತ್ರಣವೇ ಬದಲಾಗಿದೆ. ಶಿಕ್ಷಕರು ಮನಸ್ಸು ಮಾಡಿದ್ರೆ ಏನೆಲ್ಲ ಮಾಡಬಹುದು ಅನ್ನೋದಕ್ಕೆ ಈ ಶಾಲೆಯೇ ಸಾಕ್ಷಿ. ಶಾಲೆಯಲ್ಲಿ ಬಗೆಬಗೆ ಹೂಬಳ್ಳಿ,ಗಿಡಗಳು, ಹಸಿರು ತೋರಣ, ಎರೆಹುಳ ಗೊಬ್ಬರ ತಯಾರಿಕೆ, ತುಂತುರು ಹನಿ ನೀರಾವರಿ ಪದ್ದತಿ ಎಲ್ಲವನ್ನೂ ಅವರು ಪರಿಚಯಿಸಿದ್ದಾರೆ. ಶಾಲಾಮಕ್ಕಳೇ ತೈತೋಟ ನಿರ್ವಹಣೆ ಮಾಡ್ತಾರೆ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲೇ ಕಲಿಯುತ್ತಿದ್ದಾರೆ.
ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗಿದ್ದು, ವಿಜ್ಞಾನ, ಗಣಿತ, ವಿಷಯಗಳನ್ನು ಸ್ಮಾರ್ಟ್ ಕ್ಲಾಸ್ ಮೂಲಕವೇ ಕಲಿತಿದ್ದಾರೆ. ಕೆಟ್ಟದನ್ನು ಮಾತನಾಡೋಲ್ಲ, ಕೇಳಲ್ಲ, ನೋಡಲ್ಲ ಅನ್ನೋ ಮಂಗಗಳ ಮೂರ್ತಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೆಲವೊಂದನ್ನು ದಾನಿಗಳಿಂದ ಶಾಲೆಗೆ ಒದಗಿಸಿದರೆ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಇನ್ನುಳಿದ ಶಾಲಾ ಸುಧಾರಣೆಗೆ ಮುಖ್ಯ ಶಿಕ್ಷಕಿಯೇ ಸ್ವಂತ ಹಣ ವಿನಿಯೋಗಿಸಿದ್ದಾರೆ. ಈ ಸ್ಕೂಲ್ ನೋಡಲು ಜಿಲ್ಲೆಯ ಬೇರೆ ಸ್ಕೂಲ್ ಶಿಕ್ಷಕರು ಬಂದು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ತರಗತಿ ಬಂದ್ ಆಗಿವೆ. ಇದೀಗ ಶಾಲೆ ಆವರಣದಲ್ಲಿ ಶುಚಿತ್ವ ಕಾರ್ಯ ನಡೆಸಿದ್ದಾರೆ.