US Open: ನೊವಾಕ್ ದಾಖಲೆಗೆ 'ನೋ' ಎಂದ ಮೆಡ್ವೆಡೇವ್

ನ್ಯೂಯಾರ್ಕ್: 21ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲಬೇಕು, ಒಂದೇ ವರ್ಷದಲ್ಲಿ ನಾಲ್ಕು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದು ದಾಖಲೆ ಬರೆಯಬೇಕು ಎಂಬೆಲ್ಲ ಆಶಯಗಳೊಂದಿಗೆ ಅಂಗಣಕ್ಕಿಳಿದ ವಿಶ್ವದ ನಂ.1 ಆಟಗಾತ ನೊವಾಕ್ ಜೊಕೊವಿಕ್ ಗೆ ಸಿಕ್ಕಿದ್ದು ಸೋಲಿನ ಆಘಾತ. ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದಲ್ಲಿ ಡೇನಿಲ್ ಮೆಡ್ವೆಡೇವ್ 6-4, 6-4, 6-4 ಅಂತರದಲ್ಲಿ ಸೋಲುಣಿಸಿ ಎರಡು ಐತಿಹಾಸಿಕ ದಾಖಲೆಗಳನ್ನು ಮುಂದೂಡಿದರು.
ಒಂದು ವೇಳೆ ನೊವಾಕ್ ಜೊಕೊವಿಕ್ ಜಯ ಗಳಿಸಿರುತ್ತಿದ್ದರೆ 1969ರ ನ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಳ್ಳುತ್ತಿದ್ದರು. ಅಲ್ಲದೆ 21 ನೇ ಗ್ರ್ಯಾನ್ ಸ್ಲ್ಯಾಮ್ ಗೆದ್ದು ಅತಿಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ಬರೆಯುತ್ತಿದ್ದರು.
2021ರಲ್ಲಿ 27 ಗ್ರ್ಯಾನ್ ಸ್ಲ್ಯಾಮ್ ಪಂದ್ಯಗಳನ್ನು ಆಡಿರುವ ನೊವಾಕ್ ಜೊಕೊವಿಕ್ ಅವರ ನಿರಂತರ ಜಯದ ಓಟಕ್ಕೆ ಮೆಡ್ವೆಡೇವ್ ಬ್ರೇಕ್ ಹಾಕಿದರು.ಇಬ್ಬರ ಆಟದ ಶೈಲಿ ಒಂದೇ ರೀತಿಯಾಗಿದ್ದು, ಯುವ ಆಟಗಾರ ಪಂದ್ಯದ ಮೇಲೆ ಪ್ತಭುತ್ವ ಸಾಧಿಸಿ ನಂ.1 ಆಟಗಾರನಿಗೆ ಸೋಲುಣಿಸಿದರು.
ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್ಷಿಪ್ ನ ಫೈನಲ್ ನಲ್ಲಿ ಮೆಡ್ವಿಡೇವ್ ಗೆ ಸೋಲುಣಿಸಿ ಪ್ರಶಸ್ತಿ ಗೆದ್ದಿದ್ದ ಜೊಕೊವಿಕ್ ನಂತರ ಫ್ರೆಂಚ್ ಹಾಗೂ ವಿಂಬಲ್ಡನ್ ಕಿರೀಟ ಧರಿಸಿದ್ದರು.
ಫೈನಲ್ ಪಂದ್ಯದಲ್ಲಿ ತನ್ನ ನೈಜ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದ ಜೊಕೊವಿಕ್ ಹತಾಶೆಯಿಂದ ರಾಕೆಟನ್ನು ನೆಲಕ್ಕೆ ಕುಟ್ಟಿ ಆಟದ ನಿಯಮವನ್ನು ಉಲ್ಲಂಘಿಸಿದರು. ಆದರೂ 1956ರ ನಂತರ ಒಂದೇ ವರ್ಷದಲ್ಲಿ ಮೂರು ಗ್ರ್ಯಾನ್ ಸ್ಲಾಮ್ ಗೆದ್ದ ಮೊದಲ ಆಟಗಾರರೆನಿಸಿದರು.