SPORTS:
ಮುಂಬೈ: ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಉರುಳಿಸಲು ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್ ತಂಡ 15ನೇ ಆವೃತ್ತಿಯ ಐಪಿಎಲ್ 2022 ನಲ್ಲಿ ತನ್ನ 5ನೇ ಗೆಲುವು ಕಂಡಿದೆ. 208 ರನ್ ಗಳ ಚೇಸಿಂಗ್ ನಲ್ಲಿ ಹಿನ್ನಡೆ ಕಂಡ ಸನ್ ರೈಸರ್ಸ್ ಹೈದರಾಬಾದ್, 21 ರನ್ ಗಳ ಸೋಲು ಕಂಡಿತು.
ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಬ್ಬರದ ಆಟವಾಡುವ ಮೂಲಕ ಗಮನಸೆಳೆಯಿತು. ಡೇವಿಡ್ ವಾರ್ನರ್ (92ರನ್) ಹಾಗೂ ರೋವ್ ಮನ್ ಪಾವೆಲ್ (67ರನ್) ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಗೆ 207 ರನ್ ಬಾರಿಸಿತು. ಪ್ರತಿಯಾಗಿ ಸನ್ ರೈಸರ್ಸ್ ಹೈದರಾಬಾದ್, ನಿಕೋಲಸ್ ಪೂರನ್ (62ರನ್) ಸ್ಫೋಟಕ ಇನ್ನಿಂಗ್ಸ್ ನ ನಡುವೆಯೂ 8 ವಿಕೆಟ್ ಗೆ 186 ರನ್ ಕಲೆ ಹಾಕಿ ಸೋಲು ಕಂಡಿತು.
ಚೇಸಿಂಗ್ ಮಾಡಲು ಆರಂಭಿಸಿದ ಸನ್ ರೈಸರ್ಸ್ ತಂಡಕ್ಕೆ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬೇಕಾದಂಥ ಆರಂಭ ಸಿಗಲಿಲ್ಲ. ಹಾಲಿ ಆವೃತ್ತಿಯಲ್ಲಿ ಸನ್ ರೈಸರ್ಸ್ ತಂಡದ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಅಭಿಷೇಕ್ ವರ್ಮ(7) ಹಾಗೂ ನಾಯಕ ಕೇನ್ ವಿಲಿಯಮ್ಸನ್ (4) ತಂಡದ ಮೊತ್ತ 25 ರನ್ ದಾಟುವ ಮುನ್ನವೇ ಡಗ್ ಔಟ್ ಗೆ ಸೇರಿದ್ದರು.
ಖಲೀಲ್ ಅಹ್ಮದ್ ಎಸೆತದಲ್ಲಿ ಅಭಿಷೇಕ್ ಶರ್ಮ ಮೊದಲಿಗರಾಗಿ ವಿಕೆಟ್ ಒಪ್ಪಿಸಿದರೆ, ನಾಯಕ ಕೇನ್ ವಿಲಿಯಮ್ಸನ್, ಆನ್ರಿಚ್ ನೋಕಿಯೆ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ತಂಡ ರಾಹುಲ್ ತ್ರಿಪಾಠಿ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತು. ಅದರಂತೆಯೇ ಬ್ಯಾಟಿಂಗ್ ಆರಂಭಿಸಿದ್ದ ತ್ರಿಪಾಠಿ 18 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಇದ್ದ 22 ರನ್ ಸಿಡಿಸಿದ್ದ ವೇಳೆ ಮಿಚೆಲ್ ಮಾರ್ಷ್ ಗೆ ವಿಕೆಟ್ ನೀಡಿದರು.