SPORTS:
ಬೆಂಗಳೂರು: ಮಹತ್ವದ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ತಂಡ ಆಘಾತ ಅನುಭವಿಸಿದೆ. ಇಂಡಿಯನ್ ಸೂಪರ್ ಲೀಗ್ (ISL) ಫುಟ್ಬಾಲ್ ಟೂರ್ನಿಯಲ್ಲಿ ಬಿಎಫ್ ಸಿ 0-2 ರಿಂದ ಮೋಹನ್ ಬಗಾನ್ ವಿರುದ್ಧ ಸೋಲು ಕಂಡಿತು. ಈ ಮೂಲಕ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುವ ಕನಸು ದೂರ ಸರಿದಂತೆ ಆಗಿದೆ. ಮೋಹನ್ ತಂಡ ಉಪಾಂತ್ಯದ ಬಾಗಿಲಲ್ಲಿ ಬಂದು ನಿಂತಿದೆ.
ಮೊದಲಾವಧಿಯಲ್ಲಿ ತಂಡಗಳು ಭರ್ಜರಿ ಪ್ರದರ್ಶನ ನೀಡಿದ್ದ ಪರಿಣಾಮ ಈ ಅವಧಿಯಲ್ಲಿ ಗೋಲುಗಳು ದಾಖಲಾಗಲಿಲ್ಲ. ಆದರೆ ಈ ಅವಧಿಯ ಹೆಚ್ಚುವರಿ ಸಮಯದಲ್ಲಿ ಮೋಹನ್ ತಂಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮೊದಲ ಗೋಲಿನ ನಗೆ ಬೀರಿತು. ಮೊದಲ 45 ನಿಮಿಷದಲ್ಲಿ ಎದುರಾಳಿ ತಂಡ 1-0ಯಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಮೋಹನ್ ತಂಡ 85ನೇ ನಿಮಿಷದಲ್ಲಿ ಗೋಲು ಬಾರಿಸಿ ಅಬ್ಬರಿಸಿದರು. ಅಲ್ಲದೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಳೂರು ತಂಡ ಕೊನೆಯ ಕ್ಷಣದಲ್ಲಿ ಗೋಲು ಬಾರಿಸುವ ಆಸೆ ಫಲಿಸಲಿಲ್ಲ.
ಎಟಿಕೆ ತಂಡ ಆಡಿದ 18 ಪಂದ್ಯಗಳಲ್ಲಿ 9 ಜಯ ದಾಖಲಿಸಿದ್ದು, 7 ಡ್ರಾ, 2 ಸೋಲು ಕಂಡಿದ್ದು 34 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ 19 ಪಂದ್ಯಗಳಲ್ಲಿ 7 ಜಯ, 5 ಡ್ರಾ, 7 ಸೋಲುಗಳನ್ನು ಕಂಡಿದ್ದು 26 ಅಂಕಗಳನ್ನು ಕಲೆ ಹಾಕಿದ್ದು ಆರನೇ ಸ್ಥಾನದಲ್ಲಿದೆ.