SPORTS:
ಬೆಂಗಳೂರು: ಒಲಿಂಪಿಕ್ಸ್ 'ಎ' ಅರ್ಹತಾ ಶ್ರೇಣಿಯಲ್ಲಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಕಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶ್ರೀಹರಿ ನಟರಾಜ್ ಅವರನ್ನು ಜೈನ್ ವಿಶ್ವವಿದ್ಯಾನಿಲಯದ ವತಿಯಿಂದ ಗುರುವಾರ 1 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು.
ರೋಮ್ ನ ಸೆಟ್ಟೆ ಕೊಲ್ಲಿಯಲ್ಲಿ ನಡೆದ ಫಿನಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 20ರ ಹರೆಯದ ಶ್ರೀಹರಿ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ 53.77 ಸೆಕೆಂಡುಗಳಲ್ಲಿ ಗುರಿ ತಲುಪಿ ಐತಿಹಾಸಿಕ ಸಾಧನೆ ಮಾಡಿದರು.
ಜೈನ್ ವಿವಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಶ್ರೀಹರಿಯ ಸಾಧನೆಯನ್ನು ವಿವಿಯ ಕುಲಪತಿ ಡಾ. ಚೆನ್ರಾಜ್ ರಾಯ್ ಚಂದ್ ಜೈನ್ ಮುಕ್ತಕಂಠದಿಂದ ಹೊಗಳಿದರು.
ವಿವಿಯ ಸನ್ಮಾನದ ನಂತರ ಮಾತನಾಡಿದ ಶ್ರೀಹರಿ, "ನಾನು ಬುಧವಾರ ಇಟಲಿಯಿಂದ ಆಗಮಿಸುತ್ತಿದ್ದಂತೆ ಮೊದಲು ಕರೆ ಮಾಡಿದವರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶಂಕರ್. ಪ್ರತಿಯೊಂದು ಸಂದರ್ಭದಲ್ಲೂ ಜೈನ್ ವಿವಿ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯಿಂದ ಪ್ರೋತ್ಸಾಹ ನೀಡಿದೆ.
ಜೈನ್ ವಿವಿಗೆ ನಾನು ಆಭಾರಿಯಾಗಿದ್ದೇನೆ. ಸದಾ ಸ್ಪರ್ಧೆಯಲ್ಲಿ ಇರುತ್ತಿರುವುದರಿಂದ ನನ್ನ ಓದಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಟೋಕಿಯೋ ದಲ್ಲಿ ಉತ್ತಮ ರೀತಿಯ ಪ್ರದರ್ಶನ ತೋರುವೆ" ಎಂದು ಶ್ರೀಹರಿ ಹೇಳಿದರು.