SPORTS:
ಕೊಡಗು: ಕರಾಟೆಯಲ್ಲಿ ಒಂದು ನಿಮಿಷಕ್ಕೆ 350 ಪಂಚ್ ಗಳನ್ನು ಮಾಡುವ ಮೂಲಕ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗಮರೂರು ಗ್ರಾಮದ ಅಮಂಡ ಹಿತೈಶ್ ಭೀಮಯ್ಯ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಗುರುತಿಸಿಕೊಂಡಿದ್ದಾರೆ.
ಪೊನ್ನಂಪೇಟೆ ಕುಂದಾ ಗ್ರಾಮದಲ್ಲಿರುವ ಕೂರ್ಗ್ ಇನ್ಸ್ ಟಿಟ್ಯೂಟ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿತೈಶ್ ಮರಳು ಮೂಟೆಗೆ ಒಂದು ಕೈಯಲ್ಲಿ ಒಂದು ನಿಮಿಷಕ್ಕೆ 350 ಪಂಚ್ ಮಾಡಿರುವ ವಿಡಿಯೋವನ್ನು ಆನ್‌ಲೈನಿನಲ್ಲಿ ಅಪ್‌ಲೋಡ್ ಮಾಡಿದ್ದರು.
ಇದನ್ನು ಹರಿಯಾಣದ ಫರಿದಾಬಾದ್ ನಲ್ಲಿರುವ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಪರಿಶೀಲನೆ ನಡೆಸಿ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದೆ. ಈ ಹಿಂದೆ ಒಡಿಶಾದ ಅಭಿನವ್ ಕುಮಾರ್ ಪಂಚಿಗ್ ಪ್ಯಾಡ್ ಗೆ ಒಂದು ನಿಮಿಷದಲ್ಲಿ 292 ಬಾರಿ ಪಂಚ್ ಮಾಡುವ ಮೂಲಕ ಸಾಧನೆ ಮಾಡಿದ್ದರು. ಆ ರೆಕಾರ್ಡ್ ಮುರಿಯುವ ಮೂಲಕ ಹಿತೈಶ್ ದೇಶಕ್ಕೆ ಪ್ರಥಮರು ಎನ್ನಿಸಿಕೊಂಡಿದ್ದಾರೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡೆ ಸೇರ್ಪಡೆಗೊಳ್ಳುವುದು ಇವರ ಮುಂದಿನ ಗುರಿಯಾಗಿದೆ.
ಅಮಂಡ ಸತೀಶ್ ಹಾಗೂ ನೀತಾ ದಂಪತಿಗಳ ಪುತ್ರರಾಗಿರುವ ಹಿತೈಶ್ ವಿರಾಜಪೇಟೆಯ ಗೋಜುರಿಯೋ ಕರಾಟೆ ಶಾಲೆಯ ಸನ್ಸಾಯಿ ಎಂ.ಬಿ.ಚಂದ್ರನ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.