SPORTS:
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಮುಖಾಮುಖಿಯಲ್ಲಿ ಕೆಎಲ್ ರಾಹುಲ್ ಟೀಮ್ ಗೆಲುವಿನ ನಗೆ ಬೀರಿದೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ, ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಕಂಡು, 8 ವಿಕೆಟ್ ಗೆ 153 ರನ್ ಪೇರಿಸಿತು. ಕ್ವಿಂಟನ್ ಡಿ ಕಾಕ್ (46 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ದೀಪಕ್ ಹೂಡಾ (34 ರನ್, 28 ಎಸೆತ, 1 ಬೌಂಡರಿ, 2 ಸಿಕ್ಸರ್) ಲಕ್ನೋ ತಂಡ ಉತ್ತಮ ಮೊತ್ತ ಪೇರಿಸಿಲು ನೆರವಾಗಿದ್ದರು.
ಬಳಿಕ ಲಕ್ನೋ ತಂಡದ ಸಂಘಟಿತ ಬೌಲಿಂಗ್ ಮುಂದೆ ಮಂಡಿಯೂರಿದ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ಗೆ 133 ರನ್ ಬಾರಿಸಿ 20 ರನ್ ಸೋಲು ಕಂಡಿತು. ಗೆಲುವಿನಲ್ಲಿ ಪ್ರಮಖ ಪಾತ್ರ ವಹಿಸಿದ ಕೃನಾಲ್ ಪಾಂಡ್ಯ ಹಾಗೂ ದುಷ್ಮಂತಾ ಚಾಮೀರ ತಲಾ 2 ವಿಕೆಟ್ ಉರುಳಿಸಿದರೆ, ಮೊಹ್ಸಿನ್ ಖಾನ್ ಮೂರು ವಿಕೆಟ್ ಉರುಳಿಸಿ ಮಿಂಚಿದರು. ಚೇಸಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ಆರಂಭದಲ್ಲಿಯೇ ಬಿರುಸಿನ ಬ್ಯಾಟಿಂಗ್ ಮಾಡಲು ಇಳಿದ ಮಯಾಂಕ್ ಅಗರ್ವಾಲ್ ತಾವು ಎದುರಿಸಿದ 17 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ರನ್ ಬಾರಿಸಿ ಮಯಾಂಕ್ ಅಗರ್ವಾಲ್, ದುಷ್ಮಂತ ಚಾಮೀರ ಎಸೆದ 5ನೇ ಓವರ್ ನಲ್ಲಿ ವಿಕೆಟ್ ನೀಡಿ ಹೊರನಡೆದರು. ಈ ಮೊತ್ತಕ್ಕೆ 11 ರನ್ ಸೇರಿಸುವಾಗ 15 ಎಸೆತಗಳಲ್ಲಿ ಕೇವಲ 5 ರನ್ ಬಾರಿಸಿ ಪರದಾಟ ನಡೆಸಿದ್ದ ಶಿಖರ್ ಧವನ್, ರವಿ ಬಿಷ್ಣೋಯಿ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.
ಕಳೆದ ಕೆಲವು ಪಂದ್ಯಗಳಿಂದ ಪಂಜಾಬ್ ತಂಡದ ಬ್ಯಾಟಿಂಗ್ ಬಲವಾಗಿದ್ದ ಭಾನುಕಾ ರಾಜಪಕ್ಸೆ 7 ಎಸೆತಗಳಲ್ಲಿ 9 ರನ್ ಸಿಡಿಸಿ ಕೃನಾಲ್ ಪಾಂಡ್ಯ ಮೊದಲ ಬಲಿಯಾದರು. ಬಳಿಕ ಜೊತೆಯಾದ ಜಾನಿ ಬೇರ್ ಸ್ಟೋ (32ರನ್, 28 ಎಸೆತ, 5 ಎಸೆತ) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ (18 ರನ್, 16 ಎಸೆತ, 2 ಸಿಕ್ಸರ್) 4ನೇ ವಿಕೆಟ್ ಗೆ 30 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಲಕ್ನೋ ಬೌಲರ್ ಗಳು ಗೆಲುವಿಗೆ ಶ್ರಮ ವಹಿಸುವುದನ್ನು ನಿಲ್ಲಿಸಿರಲಿಲ್ಲ.