SPORTS:
ಮುಂಬೈ(ಏ.30): ಸೂರ್ಯಕುಮಾರ್ ಯಾದವ್ ಹಾಗೂ ಲಲಿತ್ ವರ್ಮಾ ಹೋರಾಟದಿಂದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ದಡ ಸೇರಿದೆ. ಕಳೆದ 8 ಪಂದ್ಯಗಳಲ್ಲಿ ಸೋಲನ್ನೆ ಹಾಸು ಹೊದ್ದು ಮಲಗಿದ್ದ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಮಣಿಸಿ ಈ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು. ರಾಜಸ್ಥಾನ ವಿರುದ್ದ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವು ಸಾಧಿಸಿದೆ.
ಟಾರ್ಗೆಟ್ ಸುಲಭವಾಗಿದ್ದರೂ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತೆ ನೀರಸ ಪ್ರದರ್ಶನ ನೀಡಿದರು. ರೋಹಿತ್ ಕೇವಲ 2 ರನ್ ಸಿಡಿಸಿ ಔಟಾದರು. 18 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 26 ರನ್ ಸಿಡಿಸಿ ಇಶಾನ್ ಕಿಶನ್ ಔಟಾದರು. 41 ರನ್‌ಗಳಿಗೆ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡಿತು.
ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ದಿಟ್ಟ ಹೋರಾಟ ನೀಡಿದ ಸೂರ್ಯುಕಮಾರ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ತಿಲಕ್ ವರ್ಮಾ ಉತ್ತಮ ಸಾಥ್ ನೀಡಿದರು. ಪರಿಣಾಮ ಮುಂಬೈ ಆತಂಕದಿಂದ ಪಾರಾಯಿತು. ಸೂರ್ಯಕುಮಾರ್ ಹಾಗೂ ತಿಲಕ್ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಪಾಳೆಯದಲ್ಲಿ ಮೊದಲ ಗೆಲುವಿನ ವಿಶ್ವಾಸ ಮೂಡತೊಡಗಿತು. ಕಳೆದ 8 ಪಂದ್ಯಗಳಲ್ಲಿನ ಹೀನಾ ಪ್ರದರ್ಶನದಿಂದ ಹೊರಬರುವ ಸೂಚನೆ ಸಿಕ್ಕಿತು. ಅಷ್ಟರಲ್ಲೇ ಸೂರ್ಯಕುಮಾರ್ ವಿಕೆಟ್ ಪತನಗೊಂಡಿತು.
ಸೂರ್ಯಕುಮಾರ್ 39 ಎಸೆತದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿ ಔಟಾದರು.
ಮುಂಬೈ ಗೆಲುವಿಗೆ ಅಂತಿಮ 18 ಎಸೆತದಲ್ಲಿ 25 ರನ್ ಅವಶ್ಯಕತೆ ಇತ್ತು. ಪೋಲಾರ್ಡ್ ತಿಣುಕಾಡಿದರೆ, ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಮುಂಬೈಗೆ ನೆರವಾಯಿತು. ಅಂತಿಮ ಓವರ್‌ನಲ್ಲಿ 10 ರನ್ ಸಿಡಿಸಿದ ಪೊಲಾರ್ಡ್ ವಿಕೆಟ್ ಪತನಗೊಂಡಿತು. ಆದರೆ ಡೆನಿಯ್ ಸ್ಯಾಮ್ಸ್ ಸಿಕ್ಸರ್ ನೆರವಿನಿಂದ ಮುಂಬೈ ಇಂಡಿಯನ್ಸ್ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ 5 ವಿಕೆಟ್ ಗೆಲುವು ದಾಖಲಿಸಿತು. ಡೇವಿಡ್ ಅಜೇಯ 20 ರನ್ ಸಿಡಿಸಿದರು.