SPORTS: ಟೋಕಿಯೊದಲ್ಲಿ ಜು.23ರಿಂದ ನಡೆಯಲಿರುವ ಒಲಂಪಿಕ್ಸ್ಗೆ ಆಯ್ಕೆಯಾಗಿದ್ದ ಭಾರತೀಯ ತಂಡದ ಕುಸ್ತಿಪಟು ಸುಮಿತ್ ಮಲಿಕ್ ಅವರು ಬಲ್ಗೇರಿಯಾದಲ್ಲಿ ನಡೆದ ಕ್ವಾಲಿಫೈಯರ್ಸ್ ಟೆಸ್ಟ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದರಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವುದು ಕ್ರೀಡಾ ಜಗತ್ತಿನಲ್ಲಿ ಭಾರತಕ್ಕೆ ಮುಜುಗರದ ಸಂಗತಿಯಾಗಿದೆ. ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಕುಸ್ತಿಪಟುಗಳು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಎಡವಿರುವುದಕ್ಕೆ ಇದು ಎರಡನೇ ಉದಾಹರಣೆಯಾಗಿದೆ. ಕಳೆದ 2016ರಲ್ಲಿ ನಡೆದ ರಿಯೋ ಒಲಂಪಿಕ್ಸ್ಗೆ ಅರ್ಹತೆ ಪಡೆದಿದ್ದ ನರಸಿಂಗ್ ಪಂಚಮ್ ಯಾದವ್ ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿ ಅವರನ್ನು 4 ವರ್ಷ ಅಮಾನತು ಮಾಡಲಾಗಿತ್ತು. ಕಳೆದ 2018ರ ಕಾಮನ್ವೆಲ್ತ್ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಮಲಿಕ್ ಬಲ್ಗೇರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ 125 ಕೆಜಿ ವಿಭಾಗದಲ್ಲಿ ಟೊಕಿಯೋ ಒಲಂಪಿಕ್ಸ್ಗೆ ಅರ್ಹತೆ ಪಡೆದಿದ್ದರು.