SPORTS:
ಬೆಂಗಳೂರು: ಪಟಿಯಾಲದಲ್ಲಿ ನಡೆಯುತ್ತಿರುವ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯ ಹಬ್ಬತ್ತಹನಳ್ಳಿಯ ಪ್ರಿಯಾ ಮೋಹನ್ ಅವರು 400 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಅನುಭವಿ ಓಟಗಾರ್ತಿ ಕೊಡಗಿನ ಪೂವಮ್ಮ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿಗೆ ತೃಪ್ತಿಪಟ್ಟರು. ಪ್ರಿಯಾ 400 ಮೀ. ಓಟವನ್ನು 53.29 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರೆ ಪೂವಮ್ಮ 53.54 ಸೆಕೆಂಡುಗಳಲ್ಲಿ ಗುರಿತಲುಪಿದರು. ಅನುಭವಿ ಅಥ್ಲೆಟಿಕ್ಸ್ ಕೋಚ್ ಅರ್ಜುನ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಪ್ರಿಯಾ ಮಿಶ್ರ ರಿಲೇಯಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಅರ್ಜುನ್ ತಿಳಿಸಿದ್ದಾರೆ.
2019ರಲ್ಲಿ ನೇಪಾಳದಲ್ಲಿ ನಡೆದ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪ್ರಿಯಾ ಅದೇ ವರ್ಷ ಹಾಂಕಾಂಗ್ ನಲ್ಲಿ ನಡೆದ ಏಷ್ಯನ್ ಯೂಥ್ ಚಾಂಪಿನಷಿಪ್ ನ ಮೆಡ್ಲೆ ರಿಲೇಯಲ್ಲೂ ಬೆಳ್ಳಿಯ ಸಾಧನೆ ಮಾಡಿದ್ದರು. ಜೂನಿಯರ್ ವಿಭಾಗದಲ್ಲಿ ದಕ್ಷಿಣ ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಸಾಧನೆಗಳನ್ನು ಮಾಡಿ ಮೊದಲ ಬಾರಿಗೆ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಸರಕಾರದಿಂದ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕರೆ ಪ್ರಿಯಾ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬಲ್ಲ ಭರವಸೆಯ ಓಟಗಾರ್ತಿ ಎಂದು ಕೋಚ್ ಅರ್ಜುನ್ ಹೇಳಿದ್ದಾರೆ.