ಒಲಿಂಪಿಕ್ಸ್: ದಾಖಲೆ ಬರೆಯಲಿರುವ ಸಾನಿಯಾ

ಸೋಮಶೇಖರ ಪಡುಕೆರೆ
ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ವನಿತೆಯರ ಟೆನಿಸ್ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ ಭಾರತವನ್ನು ಪ್ರತಿನಿಧಿಸಲಿದೆ. ಇದರೊಂದಿಗೆ ನಾಲ್ಕು ಒಲಿಂಪಿಕ್ಸ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಸಾನಿಯಾ ಮಿರ್ಜಾ ಪಾರ್ತರಾಗಲಿದ್ದಾರೆ. ಅಂಕಿತಾ ರೈನಾ ಅವರಿಗೆ ಇದು ಮೊದಲ ಒಲಿಂಪಿಕ್ಸ್.
ಸದ್ಯ ವಿಂಬಲ್ಡನ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಸ್ಪರ್ಧಿಸುತ್ತಿರುವ ಸಾನಿಯಾ ಮತ್ತು ರೈನಾ ಮಿಶ್ರ ಡಬಲ್ಸ್ ನಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಕೇಂದ್ರ ಕ್ರೀಡಾ ಸಚಿನ ಕಿರಣ್ ರಿಜ್ಜು ಅವರು ಇಬ್ಬರೂ ಆಟಗಾರ್ತಿಯರಿಗೆ ಶುಭಕೋರಿದ್ದಾರೆ.

2008ರ ಬೀಜಿಂಗ್, 2012ರ ಲಂಡನ್ ಮತ್ತು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿರುವ ಸಾನಿಯಾ ಮಿರ್ಜಾ, ಇದುವರೆಗೂ 6 ಗ್ರ್ಯಾನ್ ಸ್ಲಾಮ್ ಡಬಲ್ಸ್ ಕಿರೀಟ ಧರಿಸಿದ್ದಾರೆ. ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಸೇರಿ ನಾಲ್ಕೂ ಗ್ರ್ಯಾನ್ ಸ್ಲಾಮ್ ಗಳಲ್ಲಿ ಚಾಂಪಿಯನ್ ಪಟ್ಟಗೆದ್ದ ಗರಿಮೆ ಸಾನಿಯಾ ಮಿರ್ಜಾ ಅವರದ್ದು.
ಈ ಬಾರಿಯ ವಿಂಬಲ್ಡನ್ ಮಿಶ್ರ ಡಬಲ್ಸನ್ ನಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಅಂಕಿತಾ ರೈನಾ ಅವರು ರಾಮ್ ಕುಮಾರ್ ರಮಾನಾಥನ್ ಅವರೊಂದಿಗೆ ಜತೆಯಾಗಿ ಡಬಲ್ಸ್ ನಲ್ಲಿ ಅಂಗಣಕ್ಕಿಳಿಯಲಿದ್ದಾರೆ. ವನಿತೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ಹಾಗೂ ಬೆಥಾನೆ ಮೆಟಕ್ ಸ್ಯಾಂಡ್ಸ್ ಜೋಡಿ ಎರಡನೇ ಸುತ್ತು ತಲುಪಿದೆ.