SPORTS: - ಸೋಮಶೇಖರ್ ಪಡುಕರೆ ಬೆಂಗಳೂರು: ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಕ್ಕಾಗಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್ ಮತ್ತು ಗುಜರಾತಿನ ಮಾನಾ ಪಟೇಲ್ ಅವರನ್ನು ಸಾರ್ವತ್ರಿಕ ಸ್ಥಾನಗಳಿಗಾಗಿ ನಾಮನಿರ್ದೇಶನ ಮಾಡಿದೆ. 2020ರಲ್ಲಿ ನಡೆಯಬೇಕಾಗಿದ್ದ ಒಲಿಂಪಿಕ್ಸ್ ಜುಲೈ 23ರಿಂದ ಆರಂಭಗೊಳ್ಳಲಿದೆ. ಈ ನಾಮನಿರ್ದೇಶನವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಈಜು ಫೆಡರೇಷನ್(ಫಿನಾ) ಗೆ ತಿಳಿಸಲಾಗಿದೆ. ಒಲಿಂಪಿಕ್ಸ್ ಅರ್ಹತೆಯು ಫಿನಾ ಮೂಲಕ ನಡೆಯುತ್ತದೆ. ಕ್ರೀಡಾಕೂಟ ಮುಂದೂಡಲ್ಪಟ್ಟ ಕಾರಣ ಫಿನಾ ಅರ್ಹತೆಯ ದಿನಾಂಕವನ್ನು 2021 ಜೂನ್ 27ರವರೆಗೂ ಮುಂದೂಡಿತ್ತು. ಫಿನಾ ಅರ್ಹತೆಯ ಮಾನದಂಡದ ಪ್ರಕಾರ ಎರಡು ರೀತಿಯಲ್ಲಿ ಅರ್ಹತೆಯನ್ನು ಗಳಿಸಬೇಕು ಒಲಿಂಪಿಕ್ಸ್ ಅರ್ಹತಾ ಸಮಯ (ಎ ಟೈಮ್) ಮತ್ತು ಒಲಿಂಪಿಕ್ಸ್ ಆಯ್ಕೆ ಸಮಯ (ಬಿ ಟೈಮ್). ಫಿನಾ ಆಯೋಜಿಸುವ ಸ್ಪರ್ಧೆಗಳಲ್ಲಿ ಯಾವ ಈಜುಗಾರ ಒಲಿಂಪಿಕ್ಸ್ ಅರ್ಹತೆಯ ಸಮಯದಲ್ಲಿ ಗುರಿ ತಲಪುತ್ತಾನೋ ಆತ ನೇರವಾಗಿ ಆಯ್ಕೆಯಾಗುತ್ತಾನೆ. ಬಿ ಸಮಯದಲ್ಲಿ ಯಾವುದೇ ಈಜುಗಾರ ಅರ್ಹತೆ ಪಡೆದರೆ, ಎ ಶ್ರೇಣಿಯಲ್ಲಿ ಅರ್ಹತೆ ಪಡೆದ ಎಲ್ಲಾ ಕೋಟಾ ಪೂರ್ಣಗೊಂಡು ಉಳಿದ ಸ್ಥಾನಗಳನ್ನು ತುಂಬಲು ಫಿನಾ ಬಿ ಶ್ರೇಣಿಯಲ್ಲಿ ಅರ್ಹತೆ ಪಡೆದವರಿಗೆ ಆಹ್ವಾನ ನೀಡುತ್ತದೆ. ಅದನ್ನು ಸಾರ್ವತ್ರಿಕ ಸ್ಥಾನ ಎನ್ನುತ್ತಾರೆ. ಒಂದು ರಾಷ್ಟ್ರದಿಂದ ಯಾವುದೇ ಈಜುಪಟು ಎ ಶ್ರೇಣಿಯಿಂದ ಅರ್ಹತೆ ಪಡೆಯದೆ ಇದ್ದಲ್ಲಿ ಆ ರಾಷ್ಟ್ರ ಒಬ್ಬ ಪುರುಷ ಹಾಗೂ ಮಹಿಳಾ ಈಜುಗಾರರಿಗೆ ನೀಡುವ ಅವಕಾಶವಿದೆ. ಇದಕ್ಕೆ ಜೂನ್ 20 ಕೊನೆಯ ದಿನಾಂಕವಾಗಿತ್ತು. ಜೂನ್ 27ರಂದು ಲಾಸ್ ಏಂಜಲೀಸ್ ನಲ್ಲಿ ಎ ಶ್ರೇಣಿಯ ಮೂಲಕ ಅರ್ಹತೆ ಪಡೆಯಲು ಕೊನೆಯ ಅವಕಾಶವಿದ್ದು, ಅಸಾಧ್ಯವಾದಲ್ಲಿ ಸಾರ್ವತ್ರಿಕ ಸ್ಥಾನ ದ ಮೂಲಕ ಅವಕಾಶ ಅಭಿಸಲಿದೆ. ಆದರೆ ಅಷ್ಟರೊಳಗೆ ಎ ಶ್ರೇಣಿಯ ಕೋಟಾ ಪೂರ್ಣಗೊಂಡಿರಬಾರದು.