SPORTS: - ಸೋಮಶೇಖರ್ ಪಡುಕರೆ, ಬೆಂಗಳೂರು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನ ನಾವು ಆಚರಿಸುವುದಕ್ಕೆ ಮುನ್ನ..... ಕ್ರಿಕೆಟ್ ಸ್ಕೋರ್ ಕೇಳಿಕೊಂಡು, ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ಯಾರು ಗೆಲ್ಲಬಹುದು ಎಂದು ಕರೆ ಮಾಡಿ ಕೇಳುತ್ತಾರೆ. ಆದರೆ ಕರ್ನಾಟಕದಿಂದ ಈ ಬಾರಿ ಒಲಿಂಪಿಕ್ಸ್ ಗೆ ಯಾರು ಆಯ್ಕೆಯಾಗಿದ್ದಾರೆ?, ಕಳೆದೊಂದು ವರ್ಷದಿಂದ ಕೊರೋನಾದಿಂದಾಗಿ ಯಾವುದೇ ಕ್ರೀಡಾಕೂಟಗಳು ನಡೆಯುತ್ತಿಲ್ಲ ಈ ಸಂದರ್ಭದಲ್ಲಿ ಕ್ರೀಡಾಪಟುಗಳು ಯಾವ ರೀತಿಯ ಬದುಕನ್ನು ನಿಭಾಯಿಸುತ್ತಿದ್ದಾರೆ?. ಪ್ರತಿ ಬಾರಿಯೂ ಒಲಿಂಪಿಕ್ಸ್ ಗೆ ಭಾರತ ತಂಡವನ್ನು ಆಯ್ಕೆ ಮಾಡಿದಾಗ ಅಲ್ಲಿ ಕನಿಷ್ಠ ಒಬ್ಬರಾದರೂ ಕನ್ನಡಿಗರಿರುತ್ತಾರೆ, ಆದರೆ ಈ ಬಾರಿ ಒಬ್ಬ ಕನ್ನಡಿಗನೂ ಇಲ್ಲ ಇದಕ್ಕೆ ಕಾರಣ ಏನಿರಬಹುದು? ಎಂದು ಪ್ರಶ್ನಿಸುವವರು ಯಾರಾದರೂ ಇದ್ದಾರೆಯೇ? ಪ್ರತಿಯೊಂದು ಶಾಲೆಯಲ್ಲೂ ಆಟದ ಅಂಗಳ ಇದೆಯೇ?, ನಗರದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಯೊಂದು ವಸತಿ ಸಮುಚ್ಛಯದಲ್ಲೂ ಆಟದ ಅಂಗಣಕ್ಕೆ ಸ್ಥಳವನ್ನು ಮೀಸಲಿಡಬೇಕು. ಕೇಂದ್ರ ಸರಕಾರದ ನಿಯಮವನ್ನು ಪಾಲಿಸಲಾಗುತ್ತಿದೆಯೇ? ಪಾಠವನ್ನೇನೋ ಆನ್ ಲೈನ್ ನಲ್ಲಿ ಮಾಡಬಬಹುದು ದೈಹಿಕ ಶಿಕ್ಷಣಕ್ಕೆ ಏನಾದರೂ ಪರಿಹಾರ ಕಂಡು ಹಿಡಿದಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳು ನಮ್ಮಲ್ಲಿ ಮೂಡಿದರೆ ಮಾತ್ರ ಇಂದು(ಜೂನ್ 23) ಜಗತ್ತಿನಾದ್ಯಂತ ಆಚರಿಸಲ್ಪಡುತ್ತಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನಾರಣೆಯನ್ನು ಕರ್ನಾಟಕದಲ್ಲೂ ಆಚರಿಸಿದರೆ ಒಂದು ಅರ್ಥವಿದೆ. ಇಲ್ಲವಾದಲ್ಲಿ ಈ ದಿನ ನಿನ್ನೆಯಂತೆಯೇ….. 1894ರಲ್ಲಿ ಪ್ಯಾರಿಸ್ ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹುಟ್ಟಿಕೊಂಡಿತು. ಜಗತ್ತಿನಾದ್ಯಂತ ಕ್ರೀಡೆಯನ್ನು ಬದುಕಿನ ಅವಿಭಾಜ್ಯ ಅಂಗವನ್ನಾಗಿಸುವ ಉದ್ದೇಶದಿಂದ ಈ ದಿನವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ವೈನ್ ಶಾಪ್ ತೆರೆದು ವ್ಯಾಯಾಮ ಶಾಲೆಯನ್ನು ಮುಚ್ಚುವುದಕ್ಕೆ ಆದ್ಯತೆ ನೀಡುವ ಭಾರತದಲ್ಲಿ ಒಲಿಂಪಿಕ್ಸ್ ದಿನಕ್ಕೆ ಅಷ್ಟು ಮಹತ್ವವನ್ನು ನಿರೀಕ್ಷಿಸುವುದು ಹೇಗೆ?. ತಾವು ನೇಮಿಸಿಕೊಂಡ ಸೋಷಿಯಲ್ ಮೀಡಿಯಾ ಸಲಹೆಗಾರರಿಗೆ ನೆನಪಾದರೆ ಒಲಿಂಪಿಕ್ಸ್ ದಿನಾಚರಣೆಯ ಬಗ್ಗೆ ಒಂದು ಟ್ವೀಟ್ ಸಂದೇಶ ಬರುತ್ತದೆ. ಮತ್ತೆ ಏನಾದರೂ ಗುತ್ತಿಗೆಯಿಂದ ಕಮಿಷನ್ ಹೊಡೆಯುವ ಯೋಜನೆಗಳಿದ್ದರೆ ಅದಕ್ಕೆ ಅನುಮೋದನೆ ನೀಡಿ ಕೂಡಲೇ ಜಾರಿಗೆ ತರಲಾಗುತ್ತದೆ. ಹೊರತು ಹಿಂದೆ ಕಟ್ಟಲಾದ ಕ್ರೀಡಾಂಗಣಗಳ ನಿರ್ವಹಣೆ ಹೇಗೆ, ಅಲ್ಲಿ ತರಬೇತುದಾರರಿದ್ದಾರಾ?, ಅವರ ಬದುಕಿಗೆ ಭದ್ರತೆ ನೀಡಲಾಗಿದೆಯಾ? ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಣಗಳು ಇವೆಯಾ?, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ನಾವು ಉದ್ಯೋಗದಲ್ಲಿ ಮೀಸಲು ಕಲ್ಪಿಸಿದ್ದೇವಾ?, ನಗದು ಬಹುಮಾನ ಯೋಜನೆ ಈಗಲೂ ನಗುತ್ತಲೇ ಇದೆಯಾ? ಮೊದಲಾದ ಕುರಿತು ಯೋಚಿಸಲು ನಮಗೆ ಸಮಯವೆಲ್ಲಿ? ಪದಕ ಗೆದ್ದು ದೇಶಕ್ಕೆ ಕೀರ್ತಿ ತರುವುದೇ ಒಲಿಂಪಿಕ್ಸ್ ಚಳುವಳಿಯ ಉದ್ದೇಶವಾಗಿಲ್ಲ. ಬದಲಾಗಿ ಉತ್ತಮ ಆರೋಗ್ಯ, ಶಾಂತಿ, ಸೌಹರ್ದತೆಯನ್ನು ಪ್ರತಿಯೊಂದು ದೇಶ, ರಾಜ್ಯದಲ್ಲಿ ನೆಲೆಸುವಂತೆ ಮಾಡುವುದೇ ಉದ್ದೇಶವಾಗಿದೆ. ಬರ್ಮುಡಾ, ಗ್ರೆನೆಡಾ, ನೌರು ಮತ್ತು ಬಹಮಾಸ್ ಅಂತ ಚಿಕ್ಕ ರಾಷ್ಟ್ರಗಳು, ಸೌಲಭ್ಯವೇ ಇಲ್ಲದಂಥ ಆಫ್ರಿಕಾದ ರಾಷ್ಟ್ರಗಳು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿವೆ. ಭಾರತವೂ ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ನಾವು ಗೆದ್ದಿದ್ದು ಒಂದು ಬೆಳ್ಳಿ ಮತ್ತು ಒಂದು ಕಂಚು. ಇದುವರೆಗೂ ಒಲಿಂಪಿಕ್ಸ್ ನಲ್ಲಿ ನಮ್ಮ ಸಾಧನೆ ಕೇಲವ 29 ಪದಕಗಳಿಗೆ ಮೀಸಲು. ಪದಕಗಳು ಒತ್ತಟ್ಟಿಗಿರಲಿ. ಕ್ರೀಡಾ ಸೌಲಭ್ಯಗಳು, ಕ್ರೀಡೆಯ ಉದ್ದೇಶ, ಕೇಂದ್ರ ನೀಡಿದ ಸೌಲಭ್ಯಗಳು ತಲಪುವುದು ಇವುಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು. ಕ್ರೀಡಾ ಖಾತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳಿಗೆ ನೀಡುವುದು ಇವುಗಳ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ಇದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕನ್ನಡಿಗರು: 2020ರಲ್ಲಿ ನಡೆಸಬೇಕಾಗಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2021ರ ಜುಲೈ 23ರಿಂದ ನಡೆಸಲಾಗುತ್ತಿದೆ. ಅಂದರೆ ಇನ್ನು ಒಂದು ತಿಂಗಳಲ್ಲಿ ಆರಂಭಗೊಳ್ಳಲಿದೆ. ಕರ್ನಾಟಕದಿಂದ ಯಾರೆಲ್ಲ ಆಯ್ಕೆಯಾಗಿದ್ದಾರೆ ಎಂದು ಗಮನಿಸಿದಾಗ. ಬೆರಳೆಣಿಕೆಗೆ ಮೀಸಲು. ಇಕ್ವೆಸ್ಟ್ರೀಯನ್ (ಕುದುರೆ ಸವಾರಿ)ನಲ್ಲಿ ಕನ್ನಡಿಗ ಫವಾದ್ ಮಿರ್ಜಾ, ಚೆನ್ನೈನಲ್ಲಿ ನೆಲೆಸಿರುವ ಕೊಡಗಿನ ಕೆ.ಸಿ .ಗಣಪತಿ (ಸೈಲಿಂಗ್) ಆಯ್ಕೆಯಾಗಿದ್ದಾರೆ. ಈಜಿನಲ್ಲಿ ಕನ್ನಡಿಗ ಶ್ರೀಹರಿ ನಟರಾಜನ್ ಅವರನ್ನು ಶಿಫಾರಸು ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ. ಅಂದರೆ ಮೂವರು ಈ ಬಾರಿ ಟೋಕಿಯೋದಲ್ಲಿ ಸ್ಪರ್ಧಿಸಲಿದ್ದಾರೆ. ಯಾವುದೇ ಒಂದು ದಿನವನ್ನು ಆಚರಣೆಯನ್ನಾಗಿ ಆಚರಿಸುವಾಗ ಅದರ ಹಿಂದಿನ ಉದ್ದೇಶದ ಅರಿವು ಸ್ಪಷ್ಟವಾಗಿರಬೇಕು. ಅದರ ಉದ್ದೇಶ ಜನರಿಗೆ ತಲುಪಿದೆಯೇ ಎಂಬುದನ್ನು ಪರಾಮರ್ಶಿಸಬೇಕು. ಇಲ್ಲವಾದಲ್ಲಿ ಅದೊಂದು ಸಾಮಾನ್ಯ ಜಂತಿಯಾಗಿ ಸಾಗುತ್ತದೆ. ಪದಕಗಳು ಸಿಗದಿದ್ದರೂ ಚಿಂತೆ ಇಲ್ಲ, ಕ್ರೀಡೆ ಬದುಕಿಗೆ ಎಷ್ಟು ಮೌಲ್ಯಯುತವಾಗಿದೆ ಎಂದು ಅರಿತರೆ ಸಾಕು. ಆಗ ಅಂತರಾಷ್ಟ್ರೀಯ ಒಲಿಂಪಿಕ್ಸ್ ದಿನದ ಆಷರಣೆಗೊಂದು ಅರ್ಥವಿರುತ್ತದೆ. ಕಳೆದ 20 ವರರ್ಷಗಳಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ದಿನದಂದು ಒಲಿಂಪಿಕ್ಸ್ ಓಟವನ್ನು ಆಯೋಜಿಸಲಾಗುತ್ತಿದೆ. ಈಗ ಬದುಕಿ ನಿಂತ ನೀರಾಗಿದೆ….ಓಟ ಎಲ್ಲಿಗೆ?