SPORTS:
ಬೆಂಗಳೂರು : ಒಲಿಂಪಿಕ್ಸ್ ಕ್ರೀಡಾಕೂಟಗಳಿರಲಿ ಅಥವಾ ಜಾಗತಿಕ ಮಟ್ಟದ ಯಾವುದೇ ಕ್ರೀಡಾಕೂಟಗಳಿರಲಿ ಅಲ್ಲಿ ಮದಿರೆ ಮತ್ತು ಮದನೆಯ ಮನೋರಂಜನೆ ಇರುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಹಲವು ಪ್ರತಿಬಂಧಗಳನ್ನು ಹೇರಲಾಗಿದೆ. ಆರಂಭದಲ್ಲಿ ಮದ್ಯಪಾನಕ್ಕೆ ಅವಕಾಶ ಇಲ್ಲ ಎಂಬ ಸುದ್ದಿ ಬಂದಿತ್ತು, ಆದರೆ ಸೋತ ತಲೆಬಿಸಿಗೆ ಎಣ್ಣೆ ಹಾಕಲೂ ಅವಕಾಶ ಇಲ್ಲಾಂದ್ರೆ ಒಲಿಂಪಿಕ್ಸ್ ಬಿಡಿ ಯಾವ ಕ್ರೀಡಾಕೂಟವೂ ನಡೆಯೊಲ್ಲ. ಆ ಕಾರಣ ಟೋಕಿಯೋದಲ್ಲಿ ಅಥ್ಲೀಟ್ ಗಳು ಮದ್ಯಪಾನ ಪಾರ್ಸೆಲ್ ತಂದು ತಮ್ಮ ರೂಮಿನಲ್ಲಿ ಕುಡಿಯಬಹುದಾಗಿದೆ.
ಮದಿರೆಯ ಕಿಕ್ ನಲ್ಲಿ ಮದನೆಯ ನೆನಪಾದರೆ ಮಾತ್ರ ಎಚ್ಚರ. ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಾಂಡೋಮ್ ಹಂಚಿಕೆಗೆ ನಿಷೇಧ ಹೇರಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದು ಅನೇಕ ಅಥ್ಲೀಟ್ ಗಳಿಗೆ ನಿರಾಸೆಯಾಗಬಹುದು. 1988ರಿಂದ ಒಲಿಂಪಿಕ್ಸ್ ನಲ್ಲಿ ಉಚಿತವಾಗಿ ಕಾಂಡೋಮ್ ನೀಡುವುದು ಸಂಪ್ರದಾಯವಾಗಿತ್ತು. ಕಳೆದ ರಿಯೋ ಒಲಿಂಪಿಕ್ಸ್ ನಲ್ಲಿ 4,50,000 ಕಾಂಡೋಮ್ ಹಂಚಲಾಗಿತ್ತು. ಪ್ರತಿಯೊಬ್ಬ ಕ್ರೀಡಾಪಟುವಿಗೆ 45 ಕಾಂಡೋಮ್ ಗಳನ್ನು ಪಡೆಯುವ ಅವಕಾಶವಿದ್ದಿತ್ತು.
32 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಡೋಮ್ ನೀಡುವ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಪರಸ್ಪರ ಅಪ್ಪಿಕೊಳ್ಳುವಂತಿಲ್ಲ. ಗೆದ್ದ ಕ್ರೀಡಾಪಟುವನ್ನು ಅಭಿನಂದಿಸುವ ನೆಪದಲ್ಲಿ ಅಪ್ಪಿಕೊಳ್ಳುವುದಕ್ಕೂ ಈ ಬಾರಿ ನಿಷೇಧ. ಎಲ್ಲದಕ್ಕೂ ಕೊರೋನಾವನ್ನೇ ದೂರಬೇಕಾಗಿದೆ. ಪ್ರೇಕ್ಷಕರ ಸಂಖ್ಯೆಗೂ ಬ್ರೇಕ್ ಹಾಕಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಕೇವಲ 20,000 ಮಂದಿಗೆ ಮಾತ್ರ ಅವಕಾಶವಿರುತ್ತದೆ ಎಂದು ಸಂಘಟನಾ ಸಮಿತಿ ಈಗಾಗಲೇ ಹೇಳಿಕೆ ನೀಡಿದೆ.
ಎಣ್ಣೆ ಇಲ್ಲದೆ ಈ ಜಗತ್ತಿನಲ್ಲಿ ಯಾವ ಆಟವೂ ನಡೆಯದು, ಅದು ಕರ್ನಾಟಕ ಸರಕಾರಕ್ಕೆ ಮೊದಲೇ ತಿಳಿದಿತ್ತು. ಈ ಕಾರಣಕ್ಕಾಗಿಯೇ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಕ್ರೀಡಾಂಗಣ, ಜಿಮ್ ಗಳನ್ನು ಮುಚ್ಚಿರುವುದು. ಈ ಸುದ್ದಿಯನ್ನು ಓದಿದ ನಂತರ ರಾಜ್ಯ ಸರಕಾರಕ್ಕೆ ತಾವು ಇಡೀ ವಿಶ್ವಕ್ಕೇ ಮಾದರಿ ಅನಿಸಬಹುದು. ಒಲಿಂಪಿಕ್ಸ್ ಗ್ರಾಮದಲ್ಲಿ ನಿತ್ಯವೂ ಮನರಂಜನಾ ಕಾರ್ಯಕ್ರಮಗಳಿರುವುದು ವಾಡಿಕೆ, ಆದರೆ ಟೋಕಿಯೋದಲ್ಲಿ ಬೇಕಿದ್ದರೆ ಒಂದು ಪೆಗ್ ಜಾಸ್ತಿ ಹಾಕಿ, ಆದರೆ ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ.