ಪರಿಸರವಿಶೇಷಸ್ಪೆಷಲ್ ಸ್ಟೋರೀಸ್

ಬದುಕನ್ನು ಕಾಯುವ ಮಳೆಕಾಡಿನೆದುರು ಅಭಿವೃದ್ಧಿಯ ಅಹಮಿಕೆ ಕೂಡದು!

ಜೂನ್ 22 – ವಿಶ್ವ ಮಳೆಕಾಡು ದಿನ.

ನಮ್ಮ ಭೂಮಿಯನ್ನು ಸದಾ ಕಾಯುತ್ತಿರುವುದು ಮಳೆಕಾಡುಗಳು. ವಿಶ್ವದ ಅರ್ಧದಷ್ಟು ಪ್ರಾಣಿ ಪ್ರಭೇದಗಳಿಗೆ ನೆಲೆ. ನಮಗೆ ಅಗತ್ಯವಾದ ಸಿಹಿನೀರನ್ನು ಒದಗಿಸುವುದು, ನಮ್ಮ ಹವಾಮಾನವನ್ನು ಸ್ಥಿರವಾಗಿರಿಸುವುದು ಇದೇ ಮಳೆಕಾಡುಗಳೇ. ಮಳೆಕಾಡು ಜೀವವೈವಿಧ್ಯದ ಆಗರ.

ಉಷ್ಣವಲಯದ ಮಳೆಕಾಡುಗಳಲ್ಲಿ ಜಗತ್ತಿನ ಶೇ. 50ಕ್ಕಿಂತ ಹೆಚ್ಚು ಜೀವ, ಸಸ್ಯ ಪ್ರಭೇದಗಳಿವೆ. ವಿಶ್ವದ ಮೂರನೇ ಎರಡು ಭಾಗದಷ್ಟು ಹೂವೈವುಧ್ಯ, ಮಿಲಿಯನ್ಗಟ್ಟಲೆ ಜೀವ ಮತ್ತು ಸಸ್ಯ ವೈವಿಧ್ಯವನ್ನು ಈ ಕಾಡುಗಳು ಒಳಗೊಂಡಿವೆ. ದಕ್ಷಿಣ ಅಮೆರಿಕ, ಮಧ್ಯ ಅಮೆರಿಕದ ಅಮೆಜಾನ್ ಕಾಡುಗಳು, ದಕ್ಷಿಣ ಆಫ್ರಿಕ, ಮಧ್ಯ ಆಫ್ರಿಕದ ಕೆಮರೂನ್, ಕಾಂಗೋ, ಮಡಗಾಸ್ಕರ್ ಕಾಡುಗಳು, ದಕ್ಷಿಣ ಏಷ್ಯಾದ ಭಾರತ, ಮ್ಯಾನ್ಮಾರ್, ಫಿಲಿಫೈನ್ಸ್, ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ಆಸ್ಟ್ರೇಲಿಯಾಗಳಲ್ಲಿ ಮಳೆಕಾಡುಗಳಿವೆ.

ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳು ಜಗತ್ತಿನಲ್ಲಿಯೇ ಅತಿ ದೊಡ್ಡ ಮಳೆಕಾಡಾದರೆ, ಮಧ್ಯ ಆಫ್ರಿಕದ ಮಡಗಾಸ್ಕರ್ ಜಗತ್ತಿನ ಎರಡನೇ ಅತಿ ದೊಡ್ಡ ಮಳೆಕಾಡೆನಿಸಿದೆ. ವಿಶ್ವದಲ್ಲಿಯೇ ಬೇರೆಲ್ಲೂ ಕಂಡುಬರದ ಅಪರೂಪದ ಸಸ್ಯ, ಪ್ರಾಣಿಗಳು ಮಡಗಾಸ್ಕರ್‌ನಲ್ಲಿವೆ. ದಕ್ಷಿಣ ಭಾರತ, ಮ್ಯಾನ್ಮಾರ್, ಮಲೇಷ್ಯಾ, ಜಾವಾ, ಬಾಂಗ್ಲಾದೇಶಗಲ್ಲಿ ಬೇರೆಲ್ಲೂ ಕಂಡುಬರದ ಮ್ಯಾನ್‌ಗ್ರೋವ್ ಕಾಡುಗಳಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕಾಡುಗಳು ಅತಿ ಅಪರೂಪದ ಪ್ರಾಣಿ ವೈವಿಧ್ಯದ ನೆಲೆಯಾಗಿವೆ.

ಉತ್ತರ ಅಮೆರಿಕ, ಬ್ರಿಟಿಷ್ ಕೊಲಂಬಿಯಾ ಕರಾವಳಿ, ಸ್ಪೇನ್‌ನ ಕಡಲತೀರ, ಐರ್ಲೆಂಡ್, ನಾರ್ವೆ, ದಕ್ಷಿಣ ಚೀನಾ, ತೈವಾನ್, ಜಪಾನ್, ಕೊರಿಯಾ, ದಕ್ಷಿಣ ಅಮೆರಿಕದ ಚಿಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಲ್ಲಿ ಸಮಶೀತೋಷ್ಣ ವಲಯದ ಮಳೆಕಾಡುಗಳಿವೆ.

ಬಹುದೊಡ್ಡ ಆತಂಕವೆಂದರೆ, ಇಂಥ ಮಳೆಕಾಡುಗಳು ಪ್ರತಿ ಸೆಕೆಂಡಿಗೆ ಒಂದೂವರೆ ಹೆಕ್ಟೇರ್​ನಂತೆ ನಾಶವಾಗುತ್ತಿವೆ. ಪ್ರತಿ ವರ್ಷವೂ 78 ದಶಲಕ್ಷ ಹೆಕ್ಟೇರ್ ಅಮೂಲ್ಯ ಮಳೆಕಾಡುಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಪ್ರತಿವರ್ಷ 50 ಸಾವಿರಕ್ಕೂ ಹೆಚ್ಚು ಕಾಡುಪ್ರಾಣಿಗಳ ಅಸಹಜ ಸಾವು ಸಂಭವಿಸುತ್ತಿದೆ. ಪಶ್ಚಿಮ ಆಫ್ರಿಕದ ಶೇ.90ರಷ್ಟು ಮಳೆಕಾಡು ಈಗಾಗಲೇ ನಾಶ ಹೊಂದಿದೆ. ಮಡಗಾಸ್ಕರ್‌ನಲ್ಲಿ ಮೂರರಲ್ಲಿ ಎರಡು ಪಾಲು ಕಾಡು ಹನನವಾಗಿದೆ. ಇಂಡೋನೇಷ್ಯಾ, ಮಲೇಷ್ಯಾಗಳಲ್ಲಿ ಭಾರಿ ಪ್ರಮಾಣದಲ್ಲಿ ಕಾಡು ಕಡಿದು, ಮನುಷ್ಯನ ಆಹಾರ, ಇಂಧನಕ್ಕೆ ಬಳಸುವ ಎಣ್ಣೆಗಾಗಿ ಪಾಮ್ ಮರ ಬೆಳೆಸಲಾಗುತ್ತಿದೆ. ಇಂಡೋನೇಷ್ಯಾದಲ್ಲಿ 9 ಮಿಲಿಯನ್ ಹೆಕ್ಟೇರ್ ಪ್ರದೇಶದ ಕಾಡನ್ನು ಕೂಡ ಪಾಮ್ ಬೆಳೆಯುವುದಕ್ಕಾಗಿ ಬಲಿಗೊಡಲಾಗಿದೆ. ಅಮೆಜಾನ್ ಕಾಡು 2030ರ ಹೊತ್ತಿಗೆ ಶೇ. 60ರಷ್ಟು ನಾಶವಾಗಿರುತ್ತದೆ ಎಂದು ಪರಿಣಿತರಉ ಆತಂಕ ವ್ಯಕ್ತಪಡಿಸಿದ್ದಾರೆ.

ಜೀವ ಕಾಯುವ ಮಳೆಕಾಡುಗಳ ಮಹತ್ವದ ಬಗ್ಗೆ ಬಹುಶಃ ಗೊತ್ತಿದ್ದೂ ಅಭಿವೃದ್ಧಿಯ ಅಹಮಿಕೆಯೊಂದು ಮನುಷ್ಯನನ್ನು ವಿವೇಕಹೀನನಾಅಗಿಸುತ್ತಲೇ ಇದೆ. ಪಾಮ್ ಎಣ್ಣೆಗಾಗಿ, ರಬ್ಬರ್ ಬೆಳೆಯುವುದಕ್ಕಾಗಿ, ಕಾಫೀ ತೋಟಕ್ಕಾಗಿಯೇ ಜಗತ್ತಿನ ಅದೆಷ್ಟೋ ಭಾಗದ ಮಳೆಕಾಡುಗಳನ್ನು ನಾಶಪಡಿಸಲಾಗಿದೆ ಎಂದಬುದನ್ನು ಗಮನಿಸಿದರೆ, ಮನುಷ್ಯನ ಅಹಂಕಾರದ ಅತಿರೇಕವೆಂಥದೆಂಬುದನ್ನು ಕಾಣಬಹುದು.

ಹೀಗೆ ಮಳೆಕಾಡುಗಳನ್ನು ಕಳೆದುಕೊಳ್ಳುವುದರಿಂದ ಜಗತ್ತಿನೆದುರು ತೆರೆದುಕೊಳ್ಳಬಹುದಾದ ಅಪಾಯ ಸಣ್ಣದಲ್ಲ. ಅದಕ್ಕಾಗಿಯೇ ಅರಣ್ಯನಾಶವನ್ನು ಎದುರಿಸಲು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ಮಳೆಕಾಡುಗಳನ್ನು ರಕ್ಷಿಸಲು ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ಅನುವಾಗಲೆಂದೇ ವಿಶ್ವ ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ. ಒಂದು ಎಚ್ಚರವನ್ನು ನಮ್ಮೆಲ್ಲರನ್ನೂ ಮೂಡಿಸುವ ದಿನವಿದು.

ವಿಶ್ವ ಮಳೆಕಾಡು ದಿನವನ್ನು ಮೊದಲ ಸಲ ಗೊತ್ತುಮಾಡಿದ್ದು 2017ರಲ್ಲಿ, ಮಳೆಕಾಡು ಸಹಭಾಗಿತ್ವ ಪರಿಕಲ್ಪನೆಯೊಂದಿಗೆ. ಮಳೆಕಾಡು ಪರಿಸರದಲ್ಲಿ ವಾಸಿಸುವ ಸ್ಥಳೀಯ ಜನರೊಂದಿಗೆ ಕೆಲಸ ಮಾಡುವ ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಆರೋಗ್ಯಕರ ಮಳೆಕಾಡುಗಳನ್ನು ಪುನಃಸ್ಥಾಪಿಸಲು ಮತ್ತು ಪುನರುತ್ಪಾದಿಸಲು ನೆರವಾಗುವ ಯೋಜನೆಗಳನ್ನು ರೂಪಿಸುವ ಯತ್ನವು ಮಳೆಕಾಡು ದಿನದ ಆಚರಣೆಯೊಂದಿಗೆ ಕ್ರಿಯಾಶೀಲವಾಗುತ್ತದೆ. ಈ ದಿನವು ಮಳೆಕಾಡಿನ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ, ನಾವೆಲ್ಲರೂ ಮಳೆಕಾಡುಗಳನ್ನು ರಕ್ಷಿಸಲು ಸಕಾರಾತ್ಮಕ ಮತ್ತು ಭರವಸೆಯ ಕ್ರಮವನ್ನು ತೆಗೆದುಕೊಳ್ಳುವುದಕ್ಕೆ, ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ಉಳಿಸಿರುವ ಮಳೆಕಾಎಇನ ಜೀವಿತಾವಧಿಯನ್ನು ಕಾಪಾಡಿಕೊಳ್ಳಲು ಹೆಜ್ಜೆಯಿಡುವುದಕ್ಕೆ ಹಾದಿ.

ಮಳೆಕಾಡು ಸಹಭಾಗಿತ್ವವು ಅಮೆಜಾನ್‌ನಲ್ಲಿ ಅನೇಕ ಸಮುದಾಯ ಆಧಾರಿತ ಯೋಜನೆಗಳನ್ನು ಹೊಂದಿದೆ. ಮಳೆಕಾಡು ದಿನವು 70ಕ್ಕೂ ಹೆಚ್ಚು ಜಾಗತಿಕ ಪಾಲುದಾರರ ಪಾಲ್ಗೊಳ್ಳುವಿಕೆಯಿಂದ ಬೆಂಬಲಿತ. ಪರಿಸರ ವಕೀಲರಿಂದ ಹಿಡಿದು ಮಾಧ್ಯಮಗಳವರೆಗೆ ಪಾಲ್ಗೊಳ್ಳುವಿಕೆಯ ವ್ಯಾಪ್ತಿಯಿದೆ. ಈ ದಿಸೆಯಲ್ಲಿನ ಕಾರ್ಯಕ್ರಮದ ಘೋಷವಾಕ್ಯವೇ ಬಲು ಅರ್ಥಪೂರ್ಣ. ಅದು, “ಏಕೆಂದರೆ ವಿಶ್ವವು ಕಾಯಲಾರದು” (Because the World Can’t Wait) ಎಂಬುದು.

ಮಳೆಕಾಡು ಸಹಭಾಗಿತ್ವವು ಜೀವವೈವಿಧ್ಯತೆ, ಸ್ಥಳೀಯ ಜನಸಮುದಾಯದ ರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ನೆರವಾಗುವ ನಿಟ್ಟಿನಲ್ಲಿ 2007ರಿಂದ ಆಶಾದಾಯಕ ಸಂದೇಶವನ್ನು ಹರಡುವಲ್ಲಿ ತೊಡಗಿಸಿಕೊಂಡಿದೆ.

ಮಳೆಕಾಡು ಈ ವಿಶ್ವವನ್ನು ಕಾಯುತ್ತಿರುವ ಬಗೆಯೇ ರೋಚಕ. ಅಮೆಜಾನ್ ಮಳೆಕಾಡು ಸುಮಾರು 60 ದಶಲಕ್ಷ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಅಟ್ಲಾಂಟಿಕ್ ಸಾಗರವು ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಉಷ್ಣವಲಯದ ಹವಾಮಾನವನ್ನು ಸೃಷ್ಟಿಸಲು ಸಾಕಷ್ಟು ವಿಸ್ತಾರವಾದಾಗ ಮಳೆಕಾಡು ರೂಪುಗೊಂಡಿತು. ಡೈನೋಸಾರ್‌ಗಳ ಸಾಮೂಹಿಕ ಅಳಿವಿನ ನಂತರ, ಒಂದು ಮೋಹಕ ವಾತಾವರಣವು ಅಭಿವೃದ್ಧಿಗೊಂಡಿತು ಮತ್ತು ಮಳೆಕಾಡಿನ ವಿಸ್ತರಣೆಗೆ ಕಾರಣವಾಯಿತು ಎಂದು ನಂಬಲಾಗುತ್ತದೆ. ಲಕ್ಷಾಂತರ ವರ್ಷಗಳಲ್ಲಿ, ಹಿಮನದಿಗಳನ್ನು ವಿಸ್ತರಿಸುವುದು ಮತ್ತು ಸಂಕುಚಿತಗೊಳಿಸುವುದು ಮುಂತಾದ ಅಂಶಗಳಿಂದಾಗಿ ಮಳೆಕಾಡು ಅನೇಕ ಕಡಿತ ಮತ್ತು ವಿಸ್ತರಣೆಗಳನ್ನು ಅನುಭವಿಸಿರಬಹುದು ಎಂಬ ಸಿದ್ಧಾಂತವಿದೆ.

ಮಳೆಕಾಡು ಕಣ್ಮರೆಯಾಗುವುದರ ಅಪಾಯದ ಬಗ್ಗೆ ಈ ಸಮಯದಲ್ಲಿ ಯೋಚಿಸಬೇಕಾಗಿದೆ. ಗಣಿಗಾರಿಕೆ, ಕೈಗಾರಿಕಾ ಅಭಿವೃದ್ಧಿ, ಕೃಷಿಗಾಗಿ ಕಾಡು ಕಡಿಯುವುದು ಅರಣ್ಯನಾಶದ ಪ್ರಮುಖ ಕಾರಣಗಳು. ಬೇರೆ ಬೇರೆ ಕಾರಣಗಳನ್ನು ಮುಂದಿಟ್ಟು ಹೆಚ್ಚು ಹೆಚ್ಚು ಅರಣ್ಯ ಪ್ರದೇಶಗಳನ್ನು ಆಕ್ರಮಿಸುವುದು ನಡೆದೇ ಇದೆ. ಹೀಗೆ ಯಾವ್ಯಾವ ನೆಪಗಳನ್ನು ಮುಂದಿಟ್ಟು ಅರಣ್ಯವನ್ನು ತೆರವುಗೊಳಿಸಲಾಗುತ್ತದೆಯೋ ಅವುಗಳಿಗಾಗಿ ಹೆಚ್ಚಿನ ಮೂಲಸೌಕರ್ಯಗಳು ಬೇಕಾಗುತ್ತವೆ. ರಸ್ತೆಗಳು ಮತ್ತು ದೊಡ್ಡ ಯಂತ್ರೋಪಕರಣಗಳ ರಕ್ಕಸ ಹೆಜ್ಜೆ ಅರಣ್ಯ ಪ್ರದೇಶವನ್ನು ಆವರಿಸುತ್ತದೆ. ಹೀಗೆ ಮಳೆಕಾಡುಗಳ ಆಹುತಿ ಆಗಿಬಿಡುತ್ತದೆ. ಅಲ್ಲಿನ ಮತ್ತು ಸುತ್ತಮುತ್ತಲಿನ ವನ್ಯಜೀವಿಗಳ ಆವಾಸಸ್ಥಾನಗಳು, ಸ್ಥಳೀಯ ಜನರ ಮನೆಗಳು ಯಂತ್ರಗಳ ಅಬ್ಬರದಡಿಯಲ್ಲಿ ಅಳಿದುಹೋಗುತ್ತವೆ. ಅವ್ಯಾಹತ ಅರಣ್ಯನಾಶವು ಹವಾಮಾನ ಬದಲಾವಣೆ, ಪ್ರವಾಹ, ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ. ಮಳೆಕಾಡುಗಳು ನಾಶವಾದರೆ ತಾಪಮಾನ ಏರಿಕೆ, ನೀರಿನ ಕೊರತೆ, ಮಾರಣಾಂತಿಕ ಕಾಯಿಲೆಗಳಿಗೆ ಔಷಧ ಕೊರತೆ ಉಂಟಾಗಬಲ್ಲದು. ಇದರ ಮುಂದುವರಿಕೆಯಾಗಿ ನಮ್ಮ ಭೂಮಿ ಮತ್ತು ಇಲ್ಲಿನ ಜೀವನ ವಿಧಾನಕ್ಕೆ ಊಹಿಸಲಾರದಷ್ಟು ದೊಡ್ಡ ಮಟ್ಟದಲ್ಲಿ ಧಕ್ಕೆಯಾಗುತ್ತದೆ.

ಮಳೆಕಾಡುಗಳ ರಕ್ಷಣೆಗೆ ನಾವೆಲ್ಲರೂ ನಮ್ಮದೇ ಆದ ನೆಲೆಯಲ್ಲಿ ತೊಡಗಿಸಿಕೊಳ್ಳಬಹುದು. ನಮ್ಮದೇ ಗೆಳೆಯರು ಮತ್ತು ಸಂಪರ್ಕದಲ್ಲಿರುವವರ ವಲಯದಲ್ಲಿ ಮಳೆಕಾಡುಗಳ ಬಗ್ಗೆ ಕಾಳಜಿ ತೋರುವ ವಿಚಾರಗಳನ್ನು ಹಂಚಿಕೊಂಡರೂ, ಅದೊಂದು ಅಭಿಯಾನವೇ ಆದೀತು. ಗಿಡ ನೆಡುವುದು ಈ ನಿಟ್ಟಿನ ಮತ್ತೊಂದು ಮಹತ್ವದ ಹೆಜ್ಜೆ. ಮಕ್ಕಳಲ್ಲೂ ಈ ಪರಿಕಲ್ಪನೆಯ ಬಗ್ಗೆ ಅರಿವು ಮೂಡಿಸುವತ್ತ ಯೋಚಿಸಬೇಕು. ನಮ್ಮ ದೈನಂದಿನ ಬದುಕಿನಲ್ಲಿ ಪರಿಸರ ಸ್ನೇಹಿ ಆಯ್ಕೆ ಮಾಡಿಕೊಳ್ಳಲು ನಮಗೆ ವಿಪುಲ ಅವಕಾಶಗಳಿವೆ. ಅವನ್ನು ಮೊದಲು ನಾವೇ ಅನುಸರಿಸಬೇಕು. ಆಹಾರ ವ್ಯರ್ಥವಾಗದಂತೆ ಎಚ್ಚರ ವಹಿಸುವುದಂತೂ ಈ ಪರಿಸರ ಸ್ನೇಹಿ ಆಯ್ಕೆಯ ಸರಪಣಿಯಲ್ಲಿ ಅತ್ಯಂತ ಮಹತ್ವದ ಕೊಂಡಿ. ಪರಿಸರ ಸ್ನೇಹಿ ಸಂಸ್ಥೆಗಳಿಂದಲೇ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದರ ಬಗ್ಗೆಯೂ ನಾವೆಲ್ಲರೂ ಚಿಂತಿಸವುದರ ಅಗತ್ಯವಿದೆ.

ನಮ್ಮ ಮನೆಯಂಗಳದಲ್ಲಿದ್ದೇ ನಾವು ಮಾಡಬಹುದಾದ ಹಲವು ಕೆಲಸಗಳು ಮಳೆಕಾಡು ರಕ್ಷಣೆಯಲ್ಲಿ ಮಹತ್ವದ ಕೊಡುಗೆಯಾಗಬಲ್ಲವು. ನಮ್ಮ ತೋಟದಲ್ಲಿ, ಮನೆಯ ಬಾಲ್ಕನಿಯಲ್ಲಿ ಬಗೆಬಗೆಯ ಕೀಟಗಳನ್ನುಆಕರ್ಷಿಸಬಲ್ಲ ಹೂಗಿಡಗಳನ್ನು ನೆಡುವುದರಿಂದ, ಜಾಗತಿಕ ಜೀವ ವೈವಿಧ್ಯಕ್ಕೆ ನೆರವಾಗುವಂಥ ಕೆಲಸವಾಗುತ್ತದೆ. ಸ್ಥಳೀಯ ವನ್ಯಜೀವಿಗಳ ಹಿತದೃಷ್ಟಿಯಿಂದ ನಾವು ತೆಗೆದುಕೊಳ್ಳಬಹುದಾದ ಕ್ರಮಗಳು ವಲಸೆ ಹಕ್ಕಿಗಳು ತಾವು ಬಂದ ಉಷ್ಣವಲಯದ ನೆಲೆಗೆ ಮರಳುವ ಹೊತ್ತಲ್ಲಿ ಅವುಗಳ ಪಾಲಿಗೂ ಪ್ರೀತಿ ಹಂಚುವ ಮಾರ್ಗಗಳಾಗುತ್ತವೆ. ಹೀಗೆ ನಮ್ಮ ಈ ಬಗೆಯ ಅತಿ ಸಣ್ಣ ಹೆಜ್ಜೆಯೂ ಈ ಪ್ರಕೃತಿಯ ವಿಸ್ತಾರದಲ್ಲಿ ತನ್ನದೇ ಆದ ಪ್ರಭಾವವನ್ನು ಉಂಡುಮಾಡುತ್ತದೆ.

ನಿಜವಾಗಿಯೂ ನಾವೇನು ಮಾಡಬೇಕಾಗಿದೆ ಎಂಬುದನ್ನು ಯೋಚಿಸಿ ಮುನ್ನಡೆಯುವುದು ನಮ್ಮ ಹೊಣೆ.

 

 

 

 

ಪ್ರತಿ ಗಂಟೆಗೆ 6000 ಎಕರೆ ಅರಣ್ಯ ನಾಶ ಹೊಂದುತ್ತಿದೆ. ಕೃಷಿ, ನಗರೀಕರಣ, ಕೈಗಾರಿಕೆಗಳಿಂದಾಗಿ ಮಳೆಕಾಡುಗಳು ನಾಶವಾಗುತ್ತಿವೆ.

Spread the love

Related Articles

Leave a Reply

Your email address will not be published. Required fields are marked *

Back to top button