ಅಂಕಣಗಳುವಿಶೇಷ

ಮರೆಯಾದ ದೊರೆಸ್ವಾಮಿ; ಜೀವಪರ ಹೋರಾಟಗಳನ್ನು ಕಾಡಲಿದೆ ಅನಾಥ ಪ್ರಜ್ಞೆ

ಬರಹ: ಹೈದರ್

ಹೋರಾಟದ ಮುಕುಟಮಣಿಯಾಗಿದ್ದ ಎಚ್ ಎಸ್ ದೊರೆಸ್ವಾಮಿ ಅವರಿಲ್ಲದ ಮುಂದಿನ ಜೀವಪರವಾದ ಹೋರಾಟಗಳಿಗೆ ಅನಾಥ ಪ್ರಜ್ಞೆ ಕಾಡಲಿದೆ.

ನೇರ ನಿಷ್ಠುರ ನುಡಿ, ಸತ್ಯನಿಷ್ಠೆ, ನಿಜದೇಶಭಕ್ತಿ, ನಿರಂತರ ಧಣಿವರಿಯದ ಧೀಮಂತ ಹೋರಾಟ, ಸರ್ವಜನ ಸಮಭಾವ, ಅಚಲ ಸಂಕಲ್ಪ, ನಿರ್ಭೀತ ಮನೋನಿಶ್ಚಯ, ಸರ್ವೋದಯ ಸಮಾಜದ ಪರಿಕಲ್ಪನೆಯ ಪ್ರಚಾರ, ಭೂದಾನ ಚಳುವಳಿ, ಕರ್ನಾಟಕದ ಏಕೀಕರಣ ಚಳುವಳಿ, ಭಾರತದ ಸ್ವಾತಂತ್ರ್ಯ ಚಳುವಳಿ, ಇವೆಲ್ಲ ಸೇರಿಕೊಂಡರೆ ನಮ್ಮೊಂದಿಗೆ ನಿಲ್ಲುವ ನಾಡಿನ ಅಮೂಲ್ಯ ರತ್ನ ಹೆಚ್. ಎಸ್. ದೊರೆಸ್ವಾಮಿ ಅವರು. ಇವರ ಬದುಕು ಮತ್ತು ಹೋರಾಟಗಳತ್ತ ಒಮ್ಮೆ ಕಣ್ಣು ಹಾಹಿಸಿದರೆ ನಿಸ್ವಾರ್ಥ ಬದುಕಿನಲ್ಲಿ ಅಡಗಿರುವ ಸಾರ್ಥಕ ಭಾವ ಅರ್ಥವಾಗುತ್ತದೆ.

ಮೈಸೂರು ಸಂಸ್ಥಾನ ಮತ್ತು ಬ್ರಿಟಿಷರ ಆಡಳಿತ ಎಂಬ ಎರಡು ಸರ್ವಾಧಿಕಾರಿ ಪ್ರಭುತ್ವದ ವಿರುದ್ಧ ನಾಡಿನ ಮೂಲೆಮೂಲೆಗೂ ಹೋಗಿ ಜನತೆಯನ್ನು ಸಂಘಟಿಸಿ ಪ್ರಜೆಗಳ ಅಧಿಕಾರ ಪ್ರಜೆಗಳ ಕೈಯಲ್ಲಿ ಇರಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿ ಸರ್ವಾಧಿಕಾರಿ ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗಾಣಿಸಿ ಮೈಸೂರು ಸಂಸ್ಥಾನವನ್ನು ಕೂಡ ಒಕ್ಕೂಟ ವ್ಯವಸ್ಥೆಯ ಭಾಗವಾಗಿಸುವುದರಲ್ಲಿ ದೊರೆಸ್ವಾಮಿ ಅವರ ಪಾತ್ರ ಮಹತ್ವದ್ದು.

ಸ್ವಾತಂತ್ರ್ಯ ಚಳುವಳಿಯಲ್ಲಾಗಲಿ, ಕರ್ನಾಟಕದ ಏಕೀಕರಣ ಚಳುವಳಿಯಲ್ಲಾಗಲಿ, ಭೂಧಾನ ಚಳವಳಿಯಲ್ಲಾಗಲಿ ಇದರ ರಾಜಕೀಯ ಲಾಭವನ್ನು ಇತರ ನಾಯಕರು ಪಡೆದುಕೊಳ್ಳುತ್ತಿದ್ದರು, ಅದರ ಬಗ್ಗೆ ಕಿಂಚಿತ್ತೂ ಕೂಡ ಬೇಸರ ಹವಣಿಕೆಗಳಿಲ್ಲದೆ ದಿಟ್ಟವಾಗಿ ಬದುಕಿದ ಅವರ ಹೋರಾಟದ ಹಾದಿ ಗಮನಿಸಿದರೆ ಈಗಿನ ಹೋರಾಟಗಳು ಮತ್ತು ರಾಜಕಾರಣ ಸಾಗುತ್ತಿರುವ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ.

ದೊರೆಸ್ವಾಮಿ ಅವರ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಒಂದು ಶತಮಾನದ ಕರ್ನಾಟಕದ ಇತಿಹಾಸವೆ ಕಣ್ಣ ಮುಂದೆ ಹಾದು ಹೋಗುತ್ತದೆ.

ಕನಕಪುರ ತಾಲೂಕಿನ ಹಾರೋಹಳ್ಳಿಯ 60 ಜನರಿದ್ದ ಅವಿಭಕ್ತ ಕುಟುಂಬದ ಸದಸ್ಯರಾದ ಎಚ್ ಎಸ್ ದೊರೆಸ್ವಾಮಿ ಅವರ ತಂದೆಯವರಾದ ಶ್ರೀನಿವಾಸ ಅಯ್ಯಂಗಾರ್ ಅವರು ಬೆಂಗಳೂರನ ಜಿಲ್ಲಾ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು 10-4-1918ರಲ್ಲಿ ಬೆಂಗಳೂರಿನ ಬಳೆಪೇಟೆಯಲ್ಲಿ ದೊರೆಸ್ವಾಮಿ ಜನಿಸಿದರು.

ಸರ್ವಾಧಿಕಾರಿ, ಸಾಮ್ರಾಜ್ಯಶಾಹಿ, ಬ್ರಾಹ್ಮಣಶಾಹಿ ಮತ್ತು ಕೋಮುವಾದಿಗಳ ಕಟು ವಿರೋಧಿಯಾಗಿದ್ದ ದೊರೆಸ್ವಾಮಿ ಅಪ್ಪಟ ಸಮಾಜವಾದಿಯಾಗಿದ್ದರು. ಅವರಿಗೆ ಕಮ್ಯುನಿಸ್ಟ್ ಬಗ್ಗೆ ಒಲವು ಇರಲಿಲ್ಲ ಕಮ್ಯುನಿಸ್ಟ್ ರಾಜ್ಯದಲ್ಲಿ ಎಲ್ಲವು ಯಂತ್ರಗಳಂತೆ ಇರಬೇಕಾಗುತ್ತೆ ಎಂದು ಅಭಿಪ್ರಾಯಪಡುತ್ತಿದ್ದರು.

ವಿಧ್ಯಾರ್ಥಿಯಾಗಿದ್ದಾಗಲೆ ಸಂಘಟಿತ ಹೋರಾಟದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಎಚ್ ಎಸ್ ದೊರೆಸ್ವಾಮಿ ಅವರು ಹೈಸ್ಕೂಲ್ ನಲ್ಲಿದ್ದಾಗಲೆ ‘ಕಿರಿಯ‌ ತರುಣರ ಸಂಘ’ ಸ್ಥಾಪಿಸಿ ವಿದ್ಯಾರ್ಥಿ ಯುವ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಭಾಷಣ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು.

1937-39ರ ಅವಧಿಯಲ್ಲಿ ಎಚ್ ಎಸ್ ದೊರೆಸ್ವಾಮಿ ಅವರು ಇಂಟರ್ ಮೀಡಿಯೆಟ್ ಓದುತ್ತಿದ್ದಾಗ, ರಾಷ್ಟ್ರವಾದಿಯಾಗಿದ್ದ ಅಂದಿನ ಮುಂಬೈ ಮೇಯರ್ ನಾರಿಮನ್ ಅವರು ಬೆಂಗಳೂರಿಗೆ ಬಂದು ಮೈಸೂರು ಸಂಸ್ಥಾನ ಮತ್ತು ಬ್ರಿಟಿಷ್ ಸರ್ಕಾರದ ವಿರುದ್ದ ಮಾಡಿದ ಭಾಷಣದಿಂದ ಕೆರಳಿದ ಮೈಸೂರು ಸರ್ಕಾರ ನಾರಿಮನ್ ಅವರನ್ನು ಬಂದಿಸಿತು. ಆ ಸಂಧರ್ಭದಲ್ಲಿ ದೊಡ್ಡ ಗಲಾಟೆ ಆಗಿದ್ದರಿಂದ ಪೋಲೀಸರು ಬೀಸಿದ ಲಾಠಿ ಏಟು ಬೆನ್ನಿಗೆ ಬಿದ್ದ ಮೊದಲ ಅನುಭವ ದೊರೆಸ್ವಾಮಿ ಅವರದು.

1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಕೈಬಾಂಬು ಪೂರೈಕೆಯ ಆರೋಪದಲ್ಲಿ ಒಂದು ವರ್ಷ ನಾಲ್ಕು ತಿಂಗಳು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕಳೆದು ಹೊರಬಂದ ನಂತರ ಪುಸ್ತಕಗಳ ಪ್ರಕಾಶನ ಮತ್ತು ಪತ್ರಿಕೆಗಳನ್ನು ನಡೆಸುವುದರ ಮೂಲಕ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ದೇಶ ಸ್ವಾತಂತ್ರ್ಯ ಪಡೆಯುವುದರಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದರು.

ನಂತರ ಮೈಸೂರು ಸಂಸ್ಥಾನದ ವಿರುದ್ದ ಹೋರಾಟದಲ್ಲಿ ತೊಡಗಿಸಿಕೊಂಡು ಕೆಸಿ ರೆಡ್ಡಿ. ಮುಖ್ಯಮಂತ್ರಿ ಆಗುವವರೆಗೂ ಶ್ರಮಿಸಿ, ಕರ್ನಾಟಕದ ಏಕೀಕರಣ ಹೋರಾಟದಲ್ಲೂ ಅವಿರತ ಪಾತ್ರ ವಹಿಸಿದರು.
ನಂತರ ಹಲವಾರು ಸಮಾಜ ಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡು 1973 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಜೈಲುವಾಸ ಅನುಭವಿಸಿದರು.

ರೈತ ಚಳವಳು, ಕಾರ್ಮಿಕ ಚಳುವಳಿ, ಗಳಲ್ಲಿ ಚಳುವಳಿಗಳ ಸಾರಥಿಯಾಗಿದ್ದ ಎಚ್ ಎಸ್ ದೊರೆಸ್ವಾಮಿ ಅವರು ಕೋಮುವಾದಿ ಬಿಜೆಪಿ ಪ್ರಭುತ್ವದ ವಿರುದ್ಧ ಹಲವಾರು ಬಾರಿ ಹೋರಾಟದಲ್ಲಿ ಭಾಗವಹಿಸಿ ಕೋಮುವಾದಿ ಫ್ಯಾಸಿಸ್ಟ್ ರ ಕೈಯಲ್ಲಿ ಭಾರತದ ಭವಿಷ್ಯ ಅಪಾಯಕಾರಿ ಎಂದು ಪ್ರತಿಪಾದಿಸಿ ಯುವಜನರನ್ನು ಎಚ್ಚರಿಸುತ್ತಿದ್ದರು.

ಹೋರಾಟದ ಮುಕುಟಮಣಿಯಾಗಿದ್ದ ಎಚ್ ಎಸ್ ದೊರೆಸ್ವಾಮಿ ಅವರಿಲ್ಲದ ಮುಂದಿನ ಜೀವಪರವಾದ ಹೋರಾಟಗಳಿಗೆ ಅನಾಥ ಪ್ರಜ್ಞೆ ಕಾಡಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button