ಕ್ರೀಡೆ

ಬಾರದ ಲೋಕಕ್ಕೆ ಹಾರಿದ ‘ಫ್ಲಾಯಿಂಗ್ ಸಿಖ್’ ಮಿಲ್ಖಾ

ಫ್ಲಾಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದು, ಭಾರತದ ಕ್ರೀಡಾ ಇತಿಹಾಸದಲ್ಲೇ ದಾಖಲೆಗಳ ಹೊಸ ಅಧ್ಯಾಯವನ್ನೇ ಬರೆದಿದ್ದ, ಮಿಲ್ಖಾ ಸಿಂಗ್ ಶುಕ್ರವಾರ ರಾತ್ರಿ ಕೊರೋನಾದಿಂದ ಅಸುನೀಗಿದರು.

ಅವರಿಗೆ 91 ವರ್ಷ ವಯಸ್ಸಾಗಿತ್ತು. ಐದು ದಿನಗಳ ಹಿಂದೆ ಮಿಲ್ಖಾ ಅವರ ಪತ್ನಿ ನಿರ್ಮಲ್ ಕೌರ್ ಕೂಡಾ ಕೋವಿಡ್ ಗೆ ಬಲಿಯಾಗಿದ್ದರು.

ಭಾರತದ ಕ್ರೀಡಾ ಇತಿಹಾಸದಲ್ಲೇ ಮಿಲ್ಖಾ ಸಿಂಗ್ ಅವರ ಬದುಕು ಸ್ಫೂರ್ತಿಯ ಸೆಲೆ ಇದ್ದಂತೆ. ಅವರು ಸಾಗಿ ಬಂದ ಹಾದಿ, ಓಡಿ ಬಂದ ದಾರಿಯುದ್ದಕ್ಕೂ ಒಂದೊಂದು ಕತೆಯಿದೆ. 1958ರಲ್ಲಿ ಕಾರ್ಡಿಫ್ ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸುಮಾರು 52 ವರ್ಷಗಳ ನಂತರ ದಿಲ್ಲಿಯಲ್ಲಿ 2010ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೃಷ್ಣ ಪೂನಿಯಾ ಡಿಸ್ಕಸ್ ಎಸೆತದಲ್ಲಿ ಚಿನ್ನ ಗೆಲ್ಲುವವರೆಗೂ ಮಿಲ್ಖಾ ಸಿಂಗ್ ಹೆಸರಿನಲ್ಲಿ ಆ ದಾಖಲೆ ಇದ್ದಿತ್ತು. ಮಿಲ್ಖಾ ಸಿಂಗ್ ಮೂವರು ಪುತ್ರಿಯರು ಹಾಗೂ ಗಾಲ್ಫ್ ನಲ್ಲಿ 14 ಬಾರಿ ರಾಷ್ಟ್ರೀಯ ಚಾಂಪಿಯನ್ ಜೀವ್ ಮಿಲ್ಖಾ ಸಿಂಗ್ ಅವರನ್ನು ಅಗಲಿದ್ದಾರೆ.

ಭಾರತದ ವಿಭಜನೆಗೆ ಮುನ್ನ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತದ, ಮುಜಾಫರ್​ಘಡ ಜಿಲ್ಲೆಯ ಗೋವಿಂದಪುರದಲ್ಲಿ ಜನಿಸಿದ್ದ ಮಿಲ್ಖಾ ಸಿಂಗ್, ಭಾರತದ ವಿಭಜನೆ ವೇಳೆ ಪಾಕಿಸ್ತಾನದಿಂದ ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದರು. ಇಡೀ ಕುಟುಂಬದ ಹತ್ಯೆಯನ್ನು ಕಣ್ಣಾರೆ ಕಂಡ ಬಾಲಕ ಮಿಲ್ಖಾ ಸಿಂಗ್ ಅವರ ಹೆತ್ತವರು ಕೊನೆಯಲ್ಲಿ ಹೇಳಿದ ಮಾತೇ “ಭಾಗ್ ಮಿಲ್ಖಾ ಭಾಗ್”. ಅದೇ ಹೆಸರಲ್ಲಿ ಮಿಲ್ಖಾ ಸಿಂಗ್ ಅವರ ಬದುಕಿನ ಕತೆಯನ್ನು ಆಧರಿಸಿ ಹಿಂದಿ ಸಿನಿಮಾ ತೆರೆ ಕಾಣುತ್ತದೆ. ಭಾರತಕ್ಕೆ ಓಡಿ ಬಂದ ಸಿಂಗ್ ಸೇನೆಯನ್ನು ಸೇರಿಕೊಂಡು ಓಟದಲ್ಲಿ ಪ್ರಭುತ್ವ ಸಾಧಿಸುತ್ತಾರೆ.

1958ರ ಟೋಕಿಯೊ ಏಷ್ಯನ್ ಗೇಮ್ಸ್ ನಲ್ಲಿ 200 ಮತ್ತು 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು, 1962 ಜಕಾರ್ತ ಏಷ್ಯನ್ ಗೆಮ್ಸ್ ನಲ್ಲಿ 400 ಮೀ ಮತ್ತು 4*400 ಮೀ ರಿಲೇಯಲ್ಲಿ ಚಿನ್ನ ಗೆದ್ದರು, ಒಟ್ಟು ಏಷ್ಯನ್ ಗೇಮ್ಸ್ ಗಳಲ್ಲಿ ನಾಲ್ಕು ಚಿನ್ನದ ಪದಗಳ ಸಾಧನೆ ಮಾಡಿದರು. 1960ರಲ್ಲಿ ರೋಮ್ ಒಲಿಂಪಿಕ್ಸ್ ನಲ್ಲಿ 400 ಮೀ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿ ರಾಷ್ಟ್ರೀಯ ದಾಖಲೆ ಬರೆದರು. 1998ರಲ್ಲಿ ಪರಮ್ಜೀತ್ ಸಿಂಗ್ ಈ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. 1956ರ ಮೆಲ್ಬೋರ್ನ್, 1960ರ ರೋಮ್ ಮತ್ತು 1964ರ ಟೋಕಿಯೋ ಒಲಿಂಪಿಕ್ಸ್ ಗಳಲ್ಲಿ ಸಿಂಗ್ ಭಾರತವನ್ನು ಪ್ರತಿನಿಧಿಸಿದ್ದರು.

ರೋಮ್ ನಲ್ಲಿ ಕೇವಲ 0.1 ಸೆಕೆಂಡ್ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು. 1959ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಆದ ಮಿಲ್ಖಾ ಸಿಂಗ್ ಗೆ 2001ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಆದರೆ ಸಿಂಗ್ ಅವರು ತಮಗೆ ಇಷ್ಟು ತಡವಾಗಿ ಕೊಟ್ಟ ಕಾರಣ ಆ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ತಿರಸ್ಕರಿಸಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button