US Open 2021: ಎಮ್ಮಾಗೆ ಯುಎಸ್ ಓಪನ್ ಗೆದ್ದ ಹೆಮ್ಮೆ

ನ್ಯೂಯಾರ್ಕ್: ಇಬ್ಬರು ಶ್ರೇಯಾಂಕ ರಹಿತ ಆಟಗಾರರ ನಡುವೆ ನಡೆದ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಬ್ರಿಟನ್ ನ ಎಮ್ಮಾ ರಡುಕಾನು ವನಿತಾ ವಿಭಾಗದ ನೂತನ ಚಾಂಪಿಯನ್ ಪಟ್ಟ ಗೆದ್ದು ಇತಿಹಾಸ ನಿರ್ಮಿಸಿದರು.
ಆರ್ಥರ್ ಆ್ಯಷ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಮ್ಮಾ ಕೆನಡಾದ ಲೈಲಾ ಫೆರ್ನಾಂಡೀಸ್ ವಿರುದ್ಧ 6-4, 6-3 ಅಂತರದಲ್ಲಿ ಜಯ ಗಳಿಸಿ 1977ರ ನಂತರ ಪ್ರಶಸ್ತಿ ಗೆದ್ದ ಮೊದಲ ಕ್ವಾಲಿಫಯರ್ ಆಟಗಾರ್ತಿ ಎನಿಸಿದರು. ಅರ್ಹತಾ ಸುತ್ತಿನಿಂದ ಆರಂಭಿಸಿ ಪ್ರಧಾನ ಸುತ್ತು ತಲುಪಿ ಚಾಂಪಿಯನ್ ಪಟ್ಟ ಗೆಲ್ಲುವವರೆಗೂ ಎಮ್ಮಾ ಆಡಿದ 21 ಪಂದ್ಯಗಳಲ್ಲಿ ಎಲ್ಲಿಯೂ ಸೆಟ್ ಸೋತಿರಲಿಲ್ಲ ಎಂಬುದೇ ವಿಶೇಷ.
ಎರಡನೇ ಗ್ರ್ಯಾನ್ ಸ್ಲಾಮ್ ಆಡುತ್ತಿರುವ 18ರ ಹರೆಯದ ರಡುಕಾನು ಹಾರ್ಡ್ ಕೋರ್ಟ್ ಅಂಗಣಕ್ಕೆ ಕಾಲಿಟ್ಟಾಗ 150ನೇ ರಾಂಕ್ ಹೊಂದಿದ್ದರು.
2018ರ ವಿಂಬಲ್ಡನ್ ಜೂನಿಯರ್ ಸ್ಪರ್ಧೆಯಲ್ಲಿ ಎಮ್ಮಾಗೆ ಸೋಲುಣಿಸಿ ಲೈಲಾ ಪ್ರಶಸ್ತಿ ಗೆದ್ದಿದ್ದರು. 2004ರಲ್ಲಿ ಮಾರಿಯಾ ಶರಾಪೋವ ವಿಂಬಲ್ಡನ್ ಪ್ರಶಸ್ತಿ ಗೆದ್ದ ನಂತರ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿದ್ದಾರೆ.