ಕೋವಿಡ್ ಪಾಸಿಟಿವ್ ಇದ್ದರೂ ನಕಲಿ ರಿಪೋರ್ಟ್; ಇಳಕಲ್ ಖಾಸಗಿ ಆಸ್ಪತ್ರೆಯ ಮೂವರ ವಿರುದ್ಧ ಕೇಸ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರ ಲ್ಯಾಬ್ ನಲ್ಲಿ ಅನಧಿಕೃತವಾಗಿ ಕೋವಿಡ್ ಪಾಜಿಟಿವ್ ಇದ್ದರೂ ನೆಗೆಟಿವ್ ವರದಿ ನೀಡುತ್ತಿದ್ದ ಆಸ್ಪತ್ರೆಯ ವೈದ್ಯ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ..
ಖಾಸಗಿ ಆಸ್ಪತ್ರೆ ವೈದ್ಯ ಸೇರಿದಂತೆ ಇಬ್ಬರು ಲ್ಯಾಬ್ ಟೆಕ್ನಿಷಿಯನ್ಸ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು,.ಇಳಕಲ್ ನಗರದ ಮಹಾಂತೇಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಮಹಾಂತೇಶ್ ಅಕ್ಕಿ, ಲ್ಯಾಬ್ ಟೆಕ್ನಿಷಿಯನ್ ಸದ್ದಾಮ್, ಐಶ್ವರ್ಯ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ ನ ಮಹಾಂತೇಶ್ ಮಲ್ಟಿ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆಯ ವಿಜಯ ಡೈಗ್ನೊಸ್ಟಿಕ್ ಲ್ಯಾಬ್ ಸಿಬ್ಬಂದಿ ಇಂಡಿಯನ್ ಡೈಗ್ನೊಸ್ಟಿಕ್ ಸೆಂಟರ್ (ತುಳಸಿ ಹಾಸ್ಪಿಟಲ್) ಹೆಸರಿನಲ್ಲಿ ಖೊಟ್ಟಿ ರಿಪೋರ್ಟ್ ಕೊಟ್ಟಿರುವುದು ಬೆಳಕಿಗೆ ಬಂದಿದೆ.ಇಳಕಲ್ ತಾಲೂಕಿನ ಬಲಕುಂದಿ ತಾಂಡಾದ ಶಾರವ್ವ ಚವ್ಹಾಣ್, ಬಸವರಾಜ ಚವ್ಹಾಣ್, ಯುವರಾಜ ಚಹ್ವಾಣ್ ಎಂಬುವರಿಗೆ ಕೋವಿಡ್ ಪಾಜಿಟಿವ್ ಇದ್ದರೂ ನೆಗೆಟಿವ್ ಎಂದು ರಿಪೋರ್ಟ್ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಗೆ ಸರ್ಕಾರದಿಂದ ಪರವಾಣಿಗೆ ನೀಡಿಲ್ಲ.ಅದಾಗ್ಯೂ ಇಲ್ಲಿನ ಲ್ಯಾಬ್ ಟೆಕ್ನಿಷಿಯನ್ ಗಳು ಇಂಡಿಯನ್ ಡೈಗ್ನೊಸ್ಟಿಕ್ ಸೆಂಟರ್ (ತುಳಸಿ ಆಸ್ಪತ್ರೆ) ಹೆಸರಿನಲ್ಲಿ ಖೊಟ್ಟಿ ವರದಿ ಕೊಟ್ಟಿರುವುದು ಪತ್ತೆಯಾಗಿದೆ.ತಮಗೆ ನೆಗಟಿವ್ ಇದೆ ಎಂದು ಮೂವರು ಸೋಂಕಿತರು ಗ್ರಾಮದಲ್ಲಿ ಓಡಾಡಿ, ಸೋಂಕು ಹರಡಲು ಕಾರಣರಾಗಿದ್ದಾರೆ.ಖೊಟ್ಟಿ ರಿಪೋರ್ಟ್ ಕೊಟ್ಟು ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ, ಲ್ಯಾಬ್ ಟೆಕ್ನಿಷಿಯನ್ ಗಳ ವಿರುದ್ದ ದೂರು ದಾಖಲಾಗಿದ್ದು.ಹುನಗುಂದ ತಾಲೂಕು ಆರೋಗ್ಯಾಧಿಕಾರಿ ಪ್ರಶಾಂತ್ ತುಂಬಗಿ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.