ಗೋಕರ್ಣ: ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರಾಟಕ್ಕಿದೆ!

ಕಾರವಾರ : ಕೋವಿಡ್ ಲಸಿಕೆ ದೇಶದ ಎಲ್ಲ ಪ್ರಜೆಗಳಿಗೂ ಉಚಿತವೆಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ದರ ನಿಗಧಿ ಮಾಡಿ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಗೋಕರ್ಣದ ಸರಕಾರಿ ಆಸ್ಪತ್ರೆಯಲ್ಲಿ ದಿನನಿತ್ಯವೂ ಸಾವಿರಾರು ಮಂದಿ ಲಸಿಕೆಗಾಗಿ ದೌಡಾಯಿಸುತ್ತಿದ್ದಾರೆ. ಹೀಗೆ ಬರುವವರಲ್ಲಿ ಹೆಚ್ಚಿನವರು ಹತ್ತಾರು ಕಿ.ಮೀ.ದೂರದಿಂದ ಬರುವ ಗ್ರಾಮೀಣ ಪ್ರದೇಶದ ಜನತೆ ಎಂಬುದು ಇಲ್ಲಿ ವಿಶೇಷವಾಗಿದೆ.
ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು,ಕೋವ್ಯಾಕ್ಸಿನ್ ಲಸಿಕೆ ತಮಗೆ ಬೇಕಾದವರಿಗೆ ಮಾತ್ರ ನೀಡುತ್ತಿದ್ದಾರೆಂಬ ಆರೋಪ ಜಿಲ್ಲಾ ಆರೋಗ್ಯಾಧಿಕಾರಿಗಳ ಮೇಲಿದೆ.
ಲಸಿಕೆಯನ್ನು ಕೇಳಿ ಬಂದವರಿಗೆ ನೀಡದೇ ತಮಗೆ ಬೇಕಾದವರಿಗೆ ಪೋನ್ ಮೂಲಕ ಸಂಪರ್ಕಿಸಿ ಲಸಿಕೆ ನೀಡುತ್ತಿದ್ದಾರೆಂಬ ಆರೋಪವು ಸರ್ಕಾರಿ ಆಸ್ಪತ್ರೆಯ ಮೇಲೆ ಕೇಳಿ ಬಂದಿದೆ. ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಜಗದೀಶ್ ನಾಯ್ಕ ಸ್ಥಳೀಯರೇ ಆಗಿದ್ದು, ಹಲವು ವರ್ಷಗಳಿಂದ ಇಲ್ಲಿಯೇ ಬೇರು ಬಿಟ್ಟಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಅಲ್ಲಿ ಬರುವ ರೋಗಿಗಳ ಸಂಪರ್ಕದಿಂದ ಲಸಿಕೆ ವ್ಯಾಪಾರಕ್ಕೆ ಹೆಚ್ಚು ಅನುಕೂಲ ಎನ್ನಲಾಗಿದೆ.
ಇನ್ನು ಡಿ.ಎಚ್.ಓ. ಅಂಕೋಲಾ ಮೂಲದವರು. ಇವರು ತಮ್ಮ ಜಾತಿ ಬಾಂಧವರಿಗೆ ಮತ್ತು ಸಂಬಂಧಿಕರಿಗೆ ಲಸಿಕೆ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ತೋರಿಸುತ್ತಿದ್ದಾರೆಂದು ಹೇಳಲಾಗಿದೆ. ಲಸಿಕೆ ಬೆಂಗಳೂರಿನಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುವಷ್ಟರಲ್ಲಿ ಮಾಹಿತಿ ಸೋರಿಕೆಯಾಗುತ್ತಿದೆ.
ಅಂಕೋಲಾ ತಾಲೂಕಿನ ಹಿಲ್ಲೂರು ಮತ್ತು ಅಚವೆ ಗ್ರಾಮಗಳು ಕುಮಟಾ ತಾಲೂಕಿಗೆ ಒಳಪಡುವ ಗೋಕರ್ಣದಿಂದ 25 ಕಿ.ಮೀ. ನಷ್ಟು ದೂರ ಇದೆ. ಅಲ್ಲಿಯ ಗ್ರಾಮಸ್ಥರು ಗೋಕರ್ಣ ಸರಕಾರಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯುವುದರಿಂದ ಸ್ಥಳೀಯರಿಗೆ ಲಸಿಕೆ ಅಭಾವ ಆಗುತ್ತಿದೆ ಎನ್ನಲಾಗಿದೆ.
ಇನ್ನೇನು ಮಳೆಗಾಲ ಆರಂಭಗೊಂಡು ಕೃಷಿಕರು ತಮ್ಮ ಗದ್ದೆಯತ್ತ ಮುಖ ಮಾಡಿ ಕೃಷಿ ಚಟುವಟಿಕೆಯತ್ತ ತೊಡಗಿಕೊಂಡಿದ್ದಾರೆ.ದಿನ ನಿತ್ಯವೂ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವುದೋ ಅಥವಾ ಸರಕಾರಿ ಆಸ್ಪತ್ರೆಗೆ ಲಸಿಕೆಗಾಗಿ ಕಾಯುವುದೋ ತಿಳಿಯದಾಗಿದೆ ಎನ್ನುತ್ತಾರೆ ಇಲ್ಲಿನ ರೈತರು.
ಒಟ್ಟಾರೆಯಾಗಿ ಶ್ರಮಜೀವಿಗಳಿಗೆ ಲಸಿಕೆ ಲಭ್ಯವಾಗದೇ ಉಳ್ಳವರೇ ಲಸಿಕೆಯನ್ನು ಪಡೆದುಕೊಳ್ಳುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ.