OPINION:
ಬೆಂಗಳೂರು: ಹೌದು ಹೆಲ್ಮೆಟ್ ಹಾಕಿಲ್ಲದಿದ್ದರೆ ದಂಡ. ಮಾಸ್ಕ್ ಹಾಕದಿದ್ದರೆ ಫೈನ್. ಆದರೆ ರಸ್ತೆ ಸರಿ ಮಾಡದ ಬಿಬಿಎಂಪಿಗೆ ಏನು ದಂಡ ಎಂಬ ಸಾರ್ವಜನಿಕರ ಪ್ರಶ್ನೆಗೆ ಹೈಕೋರ್ಟ್ ಉತ್ತರ ಕೊಟ್ಟಿದೆ. ರಸ್ತೆಗಳ ಸಮರ್ಪಕ ನಿರ್ವಹಣೆಯಾಗದ ಕಾರಣ ಅಗೆದು ಬಿಟ್ಟ ಗುಂಡಿಗಳಿಗೆ ಬಿದ್ದು ಇದೂವರೆಗೂ ಸುಮಾರು 6ಕ್ಕೂ ಹೆಚ್ಚು ಮಂದಿ ಸಿಲಿಕಾನ್ ಸಿಟಿಯಲ್ಲಿ ಬಲಿಯಾಗಿದ್ದಾರೆ. ಈ ರೀತಿ ಮೃತಪಟ್ಟ ಸಂತ್ರಸ್ತರ ಕುಟುಂಬ ಅದ್ಯಾಕೋ ಏನೋ ಪರಿಹಾರ ಕೊಡ್ತೀವಿ ಅಂದ್ರು ಅರ್ಜಿಸಲ್ಲಿಸೋಕೆ ಮುಂದಾಗಿಲ್ಲ. ಬಹುಶಃ ಜಾಗೃತಿಯ ಕೊರತೆ ಇರಬಹುದು ಅಂತಾರೆ ತಜ್ಞರು.
ಅಂದಾಗೆ ಬಿಬಿಎಂಪಿ ರಸ್ತೆ ಗುಂಡಿಯಿಂದ ಆಗುವ ಅನಾಹುತಕ್ಕೆ ಬಿಬಿಎಂಪಿಯೇ ಹೊಣೆ ಎಂದು ಹೈಕೋರ್ಟ್ ಪರಿಹಾರ ನೀಡೋಕೆ ಸೂಚನೆ ನೀಡಿದೆ. ಆದ್ರೆ ಇದೂವರೆಗೂ ಒಂದೇ ಒಂದು ಅರ್ಜಿ ಕೂಡ ಪರಿಹಾರ ಕೋರಿ ಬಂದಿಲ್ಲ. ಒಂದು ವೇಳೆ ಅಸಮರ್ಪಕ ಫುಟ್ ಪಾತ್ ಮತ್ತು ರಸ್ತೆಯಲ್ಲಿ ಅಪಘಾತ ಸಂಭವಿಸಿ ಮೃತಪಟ್ಟರೆ ಅಂತವರು ಈ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.
ಪರಿಹಾರ ಪಡೆಯೋದು ಹೇಗೆ ಗೊತ್ತಾ?
ಮೊದಲಿಗೆ ಸಂತ್ರಸ್ತರು ಪೊಲೀಸ್ ದೂರಿನಂದಿಗೆ ಬಿಬಿಎಂಪಿ ವಲಯ ಆಯಕ್ತರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಇನ್ನು ಸಾಕ್ಷಿಯಾಗಿ ಪೊಲೀಸ್ ದೂರು, ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳನ್ನ ಪರಿಗಣಿಸಲಾಗುತ್ತದೆ. ಅವರ ಹೇಳಿಕೆ ಮತ್ತು ಸಿಸಿಟಿವಿ ದಾಖಲೆ ಆಧಾರದಲ್ಲಿಯೇ ಪರಿಹಾರ ನೀಡಲಾಗುತ್ತದೆ. ಇನ್ನು ಅಪಘಾತವಾದ 30 ದಿನಗಳ ಒಳಗೆ ಪರಿಹಾರ ಸಲ್ಲಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಈ ರೀತಿ ಅಪಘಾತಕ್ಕೆ ತುತ್ತಾಗಿ ಗಾಯಗೊಂಡರೆ 15 ಸಾವಿರ, ಮೃತಪಟ್ಟರೆ 3 ಲಕ್ಷ ಹಣವನ್ನ ಪರಿಹಾರವಾಗಿ ನೀಡಲು ತೀರ್ಮಾನಿಸಿದ್ದು ಆಗಿದೆ. ಇನ್ನು ಸಣ್ಣ ಪ್ರಮಾಣದ ಗಾಯಕ್ಕೆ 5 ಸಾವಿರ ರೂ, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಒಂದು ವೇಳೆ ಬಿಬಿಎಂಪಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಎಚ್ಚರಿಕೆ ಬೋರ್ಡ್ ಹಾಕಿದ್ದು ಆ ಜಾಗದಲ್ಲಿ ಅಪಘಾತವಾದರೆ ಪರಿಹಾರ ನೀಡುವುದಿಲ್ಲ. ಇನ್ನು ಅಪಘಾತವಾದ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸದೇ ಹೋದ್ರೆ, ಅಂತವರ ಅರ್ಜಿಯನ್ನ ತಿರಸ್ಕಾರ ಮಾಡುವ ಹಕ್ಕು ಬಿಬಿಎಂಪಿಗೆ ಇರುತ್ತೆ. 2015ರಲ್ಲಿ ಕೋರಮಂಗಲ ನಿವಾಸಿ ವಿಜಯನ್ ಮೆನನ್ ರಸ್ತೆ ಗುಂಡಿಗಳ ದುಸ್ಥಿತಿ ಕುರಿತು ಪಿಐಎಲ್ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ತರವಾದ ಆದೇಶ ನೀಡಿತ್ತು.
ಆದೇಶ ಹೊರಬಿದ್ದದ್ದು 2021ರಲ್ಲಿ. ಅಲ್ಲಿಂದ ಇದೂವರೆಗೂ ಸುಮಾರು 618 ಅಪಘಾತಗಳು ಸಂಭವಿಸಿ 651 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದ್ರಲ್ಲಿ ರಸ್ತೆ ಗುಂಡಿಯಿಂದ 6 ಮಂದಿ, ರಸ್ತೆ ಕಾಮಗಾರಿಯಲ್ಲಿ 2, ರಸ್ತೆ ಉಬ್ಬುನಿಂದಾಗಿ 6 ಮಂದಿ, ಬೆಳಕಿನ ಕೊರತೆಗೆ 4 ಮಂದಿ, ಹಾಗೂ ರಸ್ತೆ ಕಿರಿದಾದ ಕಾರಣ 3 ಮೃತಪಟ್ಟಿದ್ದಾರೆ. ಆದ್ರೆ ಇದೂವರೆಗೂ ಮೃತಪಟ್ಟ ಕುಟುಂಬದ ಯಾರೊಬ್ಬರು ಅರ್ಜಿ ಸಲ್ಲಿಸಿಲ್ಲ ಇದಕ್ಕೆ ಪ್ರಮುಖ ಕಾರಣ ಜಾಗೃತಿಯ ಕೊರತೆ.
ಹೈಕೋರ್ಟ್‌ನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಪಾಲಿಕೆ ಅಧಿಕಾರಿಗಳು ಪರಿಹಾರ ನೀಡುವುದಾಗಿ ಮಾರ್ಗಸೂಚಿಸಿ ಸಿದ್ಧಪಡಿಸಿದ್ದು ಬಿಟ್ಟರೆ, ಸಂತ್ರಸ್ತರಿಗೆ ಈ ಕುರಿತು ಜಾಗೃತಿ ಮೂಡಿಸುವುದಕ್ಕೆ ಯಾವುದೇ ಪ್ರಯತ್ನ ಮಾಡಿಲ್ಲ. ಹೀಗಾಗಿ, ಸಂತ್ರಸ್ತರು ಮಾಹಿತಿ ಕೊರತೆಯಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂಬ ಆರೋಪಗಳಿವೆ. ರಸ್ತೆ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಅತಿ ವಿರಳ. ಅವಗಢಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಇನ್ನಾದ್ರೂ ಬಿಬಿಎಂಪಿ ಸಂತ್ರಸ್ಥರಿಗೆ ಪರಿಹಾರದ ಜಾಗೃತಿ ಮೂಡಿಸುತ್ತಾ ಕಾದು ನೋಡಬೇಕಿದೆ.