ಕೊನೆಗೂ ಗೆಲುವಿನ ಹಳಿಗೆ ಮರಳಿದ ಕೋಲ್ಕತಾ ನೈಟ್‌ ರೈಡ​ರ್ಸ್

ಕೊನೆಗೂ ಗೆಲುವಿನ ಹಳಿಗೆ ಮರಳಿದ ಕೋಲ್ಕತಾ ನೈಟ್‌ ರೈಡ​ರ್ಸ್

ಮುಂಬೈ: ನಿತೀಶ್ ರಾಣಾ, ರಿಂಕು ಸಿಂಗ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿನ ನಗೆ ಬೀರಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್, ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದೆ.

ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟಿಂಗ್ ಲೈನ್‌ಅಪ್‌ಗೆ 153 ರನ್ ಟಾರ್ಗೆಟ್ ಸವಾಲಿನ ಟಾರ್ಗೆಟ್ ಅಲ್ಲ. ಆದರೆ ವಾಂಖೆಡೆ ಪಿಚ್, ರಾಜಸ್ಥಾನ ಬೌಲಿಂಗ್ ದಾಳಿ ಎದುರು ಕೆಕೆಆರ್ ರನ್ ಗಳಿಸಲು ತಡಕಾಡಿತು. ಆರಂಭದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಪತನಗೊಂಡಿತು. ಫಿಂಚ್ ಕೇವಲ 4 ರನ್ ಸಿಡಿಸಿ ಔಟಾದರು.

15ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದ್ದ ಕೋಲ್ಕತಾ ನೈಟ್‌ ರೈಡ​ರ್ಸ್​ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಸೋಮವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ತಂಡ, ಆವೃತ್ತಿಯಲ್ಲಿ 4ನೇ ಜಯ ದಾಖಲಿಸಿ ಪ್ಲೇ-ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು. ರಾಜಸ್ಥಾನ ಸತತ 2ನೇ ಸೋಲುಂಡಿತು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ಸಂಜು ಸ್ಯಾಮ್ಸನ್‌(55) ಹೋರಾಟದ ಅರ್ಧಶತಕದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 152 ರನ್‌ ಕಲೆ ಹಾಕಿತು. ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತಾ 19.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ನಿತೀಶ್‌ ರಾಣಾ(48), ರಿಂಕು ಸಿಂಗ್‌(42) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.