BREAKING NEWS:
ಶ್ರೀನಗರ: ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ಜೂನ್ 30ರಂದು ಚಾಲನೆ ದೊರೆಯಲಿದ್ದು, ಈ ವರ್ಷದ ತೀರ್ಥಯಾತ್ರೆ ಒಟ್ಟು 43 ದಿನಗಳ ಕಾಲ ನಡೆಯಲಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗೌವರ್ನರ್ ಮನೋಜ್ ನಿನ್ಹಾ ತಿಳಿಸಿದ್ದಾರೆ.
ಮನೋಜ್ ನಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ದೇವಾಲಯದ ಆಡಳಿತ ಮಂಡಳಿ ಸಭೆಯ ಬಳಿಕ ಟ್ವೀಟ್ ಮಾಡಿದ ನಿನ್ಹಾ “ಕೋವಿಡ್ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅಮರನಾಥ ಯಾತ್ರೆ ಜೂನ್ 30 ರಂದು ಆರಂಭಗೊಂಡು ಸಂಪ್ರದಾಯದಂತೆ ರಕ್ಷಾ ಬಂಧನದ ದಿನ ಮುಕ್ತಾಯಗೊಳ್ಳುತ್ತದೆ" ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೆಲವು ದಿನಗಳ ಮೊದಲು ಅಮರನಾಥ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಣೆ ಮಾಡಲಾಯಿತು.
2 ವರ್ಷ ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಕೇವಲ ಸಾಂಪ್ರದಾಯಿಕವಾಗಿ ಮಾತ್ರ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಯಾವುದೇ ಅಡ್ಡಿ ಇಲ್ಲದೇ ಜನರು ಅಮರನಾಥ ಯಾತ್ರೆ ಮಾಡಲು ಅವಕಾಶ ಮಾಡಿಕೊಡಲು ತಯಾರಿ ನಡೆಯುತ್ತಿದೆ.