BREAKING NEWS:
ನವದೆಹಲಿ: ಮುಂದಿನ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಇರುವ ಬಜೆಟ್ ಸಿದ್ಧತೆಯನ್ನು ಕೇಂದ್ರ ಸರ್ಕಾರ ಸೋಮವಾರದಿಂದ ಶುರು ಮಾಡಲಿದೆ.
ಜಗತ್ತಿನ ವಿತ್ತೀಯ ವ್ಯವಸ್ಥೆಗೆ ಮತ್ತೆ ಹಿಂಜರಿತ ಉಂಟಾಗಲಿದೆ ಎಂಬ ಆತಂಕದ ನಡುವೆಯೇ ದೇಶದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಉತ್ತೇಜನಾ ಕ್ರಮಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಪೂರ್ವ ಸಿದ್ಧತೆಯ ಮೊದಲ ದಿನದಿಂದಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ, ವಾರ್ತಾ ಮತ್ತು ಪ್ರಸಾರ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ, ಯುವಜ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಗಳಿಗೆ ಸಂಬಂಧಿಸಿದಂತೆ ಇರುವ ಪರಿಷ್ಕೃತ ಅಂದಾಜು ಪಟ್ಟಿಯ ಬಗ್ಗೆ ಸಮಾಲೋಚನೆ ನಡೆಸುತ್ತಾರೆ.
ಕೇಂದ್ರ ವಿತ್ತ ಮತ್ತು ಖರ್ಚು ವಿಭಾಗದ ಕಾರ್ಯದರ್ಶಿಗಳು ಹಾಲಿ ವಿತ್ತೀಯ ವರ್ಷ ಮತ್ತು ಹೊಸ ವಿತ್ತೀಯ ವರ್ಷಕ್ಕೆ ಅಗತ್ಯವಾಗಿರುವ ಅಂದಾಜುಪಟ್ಟಿಯನ್ನು ಅವರು ಸಿದ್ಧಗೊಳಿಸಲಿದ್ದಾರೆ.
ನ.10ರ ವರೆಗೆ ಈ ಸಮಾಲೋಚನೆ ಮುಂದುವರಿಯಲಿದೆ.