BREAKING NEWS:
ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಿಂದ ಮೃತಪಟ್ಟವರ ಸಾವು ಸಹಜ ಸಾವಲ್ಲ ಇದು ಸರ್ಕಾರ ಮಾಡಿರುವ ಕೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದರು.
ಆಕ್ಸಿಜನ್ ದುರಂತದಿಂದ ಮೃತಪಟ್ಟವರ ಕುಟುಂಬಕ್ಕೆ ಇಂದು ಡಿ.ಕೆ ಶಿವಕುಮಾರ್ ತಲಾ 1 ಲಕ್ಷ ರೂ. ಪರಿಹಾರ ವಿತರಿಸಿದರು. ನಂತರ ಮಾತನಾಡಿದ ಅವರು, ಇದು ಸರ್ಕಾರವೇ ಮಾಡಿದ ಕೊಲೆ. ಆಕ್ಸಿಜನ್ ಸಿಗದೆ ಸಾವೆಂದು ನ್ಯಾಯಾಲಯ ಹೇಳಿದೆ. ಇಷ್ಟಾದರೂ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದುರಂತದಲ್ಲಿ ಮೃಪಟ್ಟವರ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ ಪರಿಹಾರ ನೀಡಿದೆ. ಆದರೆ ನಾನು 1 ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದರು.
ಹನೂರು ಪಟ್ಟಣದ ಕೆಂಪನಂಜಯ್ಯ ಹಾಗೂ ಮಹಾದೇವಮ್ಮ ಎಂಬುವರು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಕುಟುಂಬಗಳಿಗೆ ಬೇಟಿ ನೀಡಿದ ಡಿ.ಕೆ.ಶಿವಕುಮಾರ್ ಮೊದಲಿಗೆ ಕೆಂಪನಂಜಯ್ಯ ಅವರ ಮನೆಗೆ ತೆರಳಿದ ವೇಳೆ ಕುಟುಂಬಸ್ಥರನ್ನು ಸಂತೈಸಿದರು. ಗತಿಸಿ ಹೋದವರನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳದೇ ಜೀವನ ಸಾಗಿಸಿ ಎಂದರು.
ಮಗಳಾದ ಪದ್ಮ ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದು ಉದ್ಯೋಗದ ಅವಶ್ಯಕತೆ ಇದ್ದರೆ ಭೇಟಿಯಾಗಬಹುದು ಎಂದು ಭರವಸೆ ನೀಡಿದರು. ಹನೂರಿನಲ್ಲಿ ವಿದ್ಯಾರ್ಥಿಗಳು, ನಿರುದ್ಯೋಗಿಗಳ ಅಹವಾಲು ಸ್ವೀಕರಿಸಿದರು.
ಕೊಳ್ಳೆಗಾಲ ತಾಲೂಕಿನ ಚಿನ್ನಪ್ಪನಪುರದೊಡ್ಡಿಯ ಕೊರೋನಾ ಸೋಂಕಿತ ರಂಗಸ್ವಾಮಿ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಅವರು, ಮೃತರ ಪತ್ನಿ ಪುಷ್ಪಾ ರಂಗಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 1 ಲಕ್ಷ ರುಪಾಯಿ ಪರಿಹಾರದ ಚೆಕ್ ವಿತರಿಸಿದರು. ನಂತರ ತಾಲೂಕಿನ ಪಾಳ್ಯದ ಬಿಳಿಗಿರಿ ರಂಗನಾಯ್ಕ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ ಮೃತರ ಪತ್ನಿ ವೆಂಕಟಮ್ಮ ಅವರಿಗೆ ಪರಿಹಾರದ ಚೆಕ್ ವಿತರಿಸಿದರು.
ಭಯದಿಂದ ಚಾಮರಾಜನಗರಕ್ಕೆ ಸಿಎಂ ಹೋಗುತ್ತಿಲ್ಲ:
ಯಡಿಯೂರಪ್ಪಗೆ ಜನ ಹೊಡೆಯುತ್ತಾರೆ ಎಂಬ ಭಯ ಇದೆ. ಹೀಗಾಗಿ ಚಾಮರಾಜನಗರಕ್ಕೆ ಬರುವ ಧೈರ್ಯವನ್ನ ಮಾಡುತ್ತಿಲ್ಲ. ಗುಪ್ತಚರ ಇಲಾಖೆ ಅವರಿಗೆ ಮಾಹಿತಿ ನೀಡಿದೆ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದಾಗ ಜನ ಬೈಯುತ್ತಾರೆ. ಆದರೆ ಅದನ್ನ ಸ್ವೀಕರಿಸಬೇಕು. ಆದರೆ ಅದನ್ನ ಸಿಎಂ ಬಿಎಸ್ ವೈ ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.
ಸಿಎಂ ಬಿಎಸ್ ಯಡಿಯೂರಪ್ಪ ಎಲ್ಲರ ಮನೆಗೂ ಹೋಗೋದು ಬೇಡ. ಚಾಮರಾಜನಗರಕ್ಕೆ ಬಂದು ಸಾಂತ್ವನ ಹೇಳುವ ಕೆಲಸ ಮಾಡಲಿ. ಈ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ ಎಂದು ತಿಳಿಸಿದರು.