BREAKING NEWS:
ಯಾದಗಿರಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಹೊಸ ತಿರುವು ಸಿಕ್ಕಿದ್ದು, ಆರೋಪಿಗಳು ಮಹಿಳೆಯನ್ನು ಕಾರ್ನಲ್ಲಿ ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದಾರೆಂಬ ಭಯಾನಕ ಸತ್ಯ ಹೊರಬಿದ್ದಿದೆ. ಈ ಪ್ರಕರಣದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.
ಶಹಾಪುರ ನಗರದಲ್ಲಿ ವಾಸ ಮಾಡುತ್ತಿರುವ ಮಹಿಳೆ ಚಟ್ನಳ್ಳಿ ಗ್ರಾಮಕ್ಕೆ ತೆರಳಲು ಶಹಾಪುರದ ಹೊಸ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿದ್ದಳು. ಈ ವೇಳೆ ಕಾರ್ ನಲ್ಲಿ ಆಗಮಿಸಿದ ಕಾಮುಕರು, ಬಲವಂತವಾಗಿ ಮಹಿಳೆಯನ್ನು ಕಾರ್ ನಲ್ಲಿ ಅಪಹರಿಸಿ ಶಹಾಪುರ ಹೊರಭಾಗದ ರಸ್ತಾಪುರ ಕ್ರಾಸ್ ಸಮೀಪದ ನಿರ್ಜನ ಪ್ರದೇಶದಲ್ಲಿ ತಡರಾತ್ರಿ ಗ್ಯಾಂಗ್ ರೇಪ್ ಮಾಡಿ ನಂತರ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿದಲ್ಲದೆ, ಸಿಗರೇಟಿನಿಂದ ಸುಟ್ಟು ಗಾಯಗೊಳಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.
ಕಳೆದ ಒಂದು ವರ್ಷದ ಹಿಂದೆ ಈ ಘಟನೆ ಜರುಗಿದ್ದು, ಕಾಮುಕರೇ ಮಾಡಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಸಂತ್ರಸ್ತೆಯನ್ನು ಪತ್ತೆಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇವಲ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಲ್ಲ, ಗ್ಯಾಂಗ್ ರೇಪ್ ನಂತರ ಸಿಗರೇಟ್ನಿಂದ ಸುಟ್ಟು ಮಹಿಳೆಯಿಂದ ಹಣ, ಮೊಬೈಲ್ ಕಿತ್ತುಕೊಳ್ಳಲಾಗಿದೆ. ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಭಯಾನಕ ಸತ್ಯ ಹೊರಬಿದ್ದಿದೆ.
ಮಹಿಳೆ ದೂರಿನ ಅನ್ವಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಯೋರ್ವ ಪಿಎಸ್ಐ ಕಾರ್ ಚಾಲಕನಾಗಿದ್ದ, ಮೊದಲು ಈತನನ್ನು ಬಂಧಿಸಿ ಈತನ ಮುಖಾಂತರ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ. ಸಾಮೂಹಿಕ ಅತ್ಯಾಚಾರದ ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿ ಐದು ಸಾವಿರ ರೂಪಾಯಿ ಹಾಗೂ ಮೊಬೈಲ್ ಕಸಿದುಕೊಂಡು ಪೊಲೀಸರಿಗೆ ಮಾಹಿತಿ ನೀಡದಂತೆ ಬೇದರಿಕೆ ಹಾಕಿದ್ದರು. ಭಯಗೊಂಡ ಸಂತ್ರಸ್ತೆ ಮಹಿಳೆ ಘಟನೆ ಜರುಗಿ ವರ್ಷವಾದರೂ ಪೊಲೀಸರ ಗಮನಕ್ಕೆ ತರುವ ಕೆಲಸ ಮಾಡದೇ ಭಯದಲ್ಲಿದ್ದಳು.
ಸದ್ಯ ಶಹಾಪುರ ಠಾಣೆಯಲ್ಲಿ, ಸಾಮೂಹಿಕ ಅತ್ಯಾಚಾರ, ಹಲ್ಲೆ, ಜಾತಿನಿಂದನೆ, ಬೆದರಿಕೆ ಸೇರಿದಂತೆ 10 ವಿವಿಧ ಐಪಿಸಿ ಸೆಕ್ಷನ್ ಗಳಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಹಾಪುರ ತಾಲೂಕಿನ ನಿವಾಸಿಗಳಾದ ನಿಂಗರಾಜ, ಅಯ್ಯಪ್ಪ , ಭೀಮಾಶಂಕರ ಹಾಗೂ ಶರಣು ಎಂಬ ನಾಲ್ಕುಜನ ಕಾಮೂಕರನ್ನು ಬಂಧಿಸಿದ್ದಾರೆ. ಮಹಿಳೆಯಿಂದ ಕಿತ್ತುಕೊಂಡಿದ್ದ ಮೊಬೈಲ್, ಕೃತ್ಯಕ್ಕೆ ಬಳಸಿದ ಕಾರು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಆರೋಪಿಗಳು ತಮ್ಮ ತಪ್ಪೊಪ್ಪಿಕೊಂಡಿದ್ದು, ಸ್ಥಳ ಮಹಜರು ಕೂಡ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಖುದ್ದು ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ.