BREAKING NEWS:
ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ.ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೆ, ದ್ವಿತೀಯ ಪಂದ್ಯದಲ್ಲಿ ಬೌಲರ್ಗಳು ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು ನಂತರ ಒಂದು ವಿಕೆಟ್ ಕೀಳಲು ಪರದಾಡಿದರು. ಇದರಿಂದ ಬಾಂಗ್ಲಾ ಸವಾಲಿನ ಮೊತ್ತ ಕಲೆಹಾಕಲು ಕಾರಣವಾಯಿತು.
ಇದೀಗ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿರುವ ಬಾಂಗ್ಲಾ ಕ್ಲೀನ್ ಸ್ವೀಪ್ ಎದುರು ನೋಡುತ್ತಿದೆ. ಇಂದು ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಅಂತಿಮ ತೃತೀಯ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದ್ದು, ಟೀಮ್ ಇಂಡಿಯಾ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆಲ್ಲಬೇಕಿದೆ.
ರೋಹಿತ್ ಅಲಭ್ಯ:
ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ರೋಹಿತ್ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಇದೀಗ ಇವರು ತೃತೀಯ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ನಾಯಕನ ಜವಾಬ್ದಾರಿ ಉಪ ನಾಯಕನಾಗಿರುವ ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ರೋಹಿತ್ ಜೊತೆಗೆ ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿನಿ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಮೂರನೇ ಏಕದಿನ ಪಂದ್ಯಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಕುಲ್ದೀಪ್ ಯಾದವ್ ಹೊಸದಾಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.
ಆಟಗಾರರ ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಗಳಿಂದ ಕಂಗೆಟ್ಟಿರುವ ಭಾರತಕ್ಕೆ ಯಾರನ್ನು ತಂಡದಲ್ಲಿ ಆಡಿಸಬೇಕೆಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿಯ ಆರಂಭಕ್ಕೂ ಮುನ್ನ ತಂಡದಲ್ಲಿ 20 ಆಟಗಾರರಿದ್ದರು. ಆದರೆ ಈಗ ಎರಡು ಪಂದ್ಯಗಳ ನಂತರ ಕೇವಲ 14 ಆಟಗಾರರು ಮಾತ್ರ ತಂಡದಲ್ಲಿದ್ದಾರೆ. ಒಂದು ವಾರದೊಳಗೆ ತಂಡದ ಆರು ಆಟಗಾರರು ಗಾಯಗೊಂಡಿರುವುದು ಮ್ಯಾನೇಜ್ಮೆಂಟ್ಗೆ ಕೂಡ ಟೆನ್ಶನ್ ಆಗಿದೆ. ಹೀಗಾಗಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಒತ್ತಡವಿದೆ.