BREAKING NEWS:
ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿಯಲ್ಲಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೋಮವಾರ ತನ್ನ ಮಕ್ಕಳನ್ನು ಕಂಡು ಗಳಗಳನೆ ಅತ್ತ ಘಟನೆ ಇಲ್ಲಿನ ಸಿಐಡಿ ಕಚೇರಿ ಎದುರು ನಡೆಯಿತು.
ತಾಯಿಯ ಮುಖವನ್ನು ನೋಡದೆ 20 ದಿನಗಳನ್ನು ಕಳೆದಿದ್ದ ಮಕ್ಕಳು, ಸಿಐಡಿ ಕಚೇರಿಯ ಪ್ರಾಂಗಣದಲ್ಲಿ ಅಮ್ಮನನ್ನು ಕಂಡು ಕಣ್ಣೀರಾದರು. ಅಪ್ಪ ಜೈಲಿನಲ್ಲಿದ್ದರೆ, ಅಮ್ಮ ಸಿಐಡಿ ಕಸ್ಟಡಿಯಲ್ಲಿದ್ದಾರೆ. ತಾಯಿ ಮತ್ತು ಮಕ್ಕಳ ಈ ದುಃಖದ ಕ್ಷಣಕ್ಕೆ ಕುಟುಂಬದವರು, ಸಿಐಡಿ ಸಿಬ್ಬಂದಿ ಸಾಕ್ಷಿಯಾದರು. ಅಪ್ಪ ಅಮ್ಮ ಇಬ್ಬರಿಂದಲೂ ದೂರ ಇದ್ದ ಮಕ್ಕಳು ಅಮ್ಮನಿಗಾಗಿ ಹಂಬಲಿಸಿ ಹಾತೊರೆದು ಬಂದಿದ್ದರು.
ತಾಯಿಯನ್ನು ನೋಡುತ್ತಿದ್ದಂತೆಯೇ, ದುಃಖದ ಜತೆ ಮುನಿಸಿಕೊಂಡಿದ್ದ ಮಕ್ಕಳು, ‘ನಿಮ್ಮ ತಾಯಿ ಮಾಡಿದ ತಪ್ಪಿಗೆ ನಿಮ್ಮ ಅಪ್ಪ ಜೈಲಿಗೆ ಹೋಗಿದ್ದಾನೆ ಅಂತ ನಮ್ಮ ಫ್ರೆಂಡ್ಸ್ ಮಾತಾಡ್ತಿದ್ದಾರೆ. ನಿನ್ನಿಂದಲೇ ನಿನನ್ನೂ ಮತ್ತು ಅಪ್ಪನನ್ನೂ ನಾವು ನೋಡದೇ ಇರುವಂತಾಯಿತು, ಎಲ್ಲವೂ ಆಗಿದ್ದು ನಿನ್ನಿಂದಲೇ, ನಿನ್ನ ಬಗ್ಗೆ ಪೇಪರ್ ಮತ್ತು ಟಿವಿಯೊಳಗೆ ನೋಡಿದ್ದೀವಿ, ಹೀಗೆ ಮಾಡಬಾರದಿತ್ತು’ ಎಂದಾಗ ದಿವ್ಯಾಗೆ ದುಃಖ ಉಮ್ಮಳಿಸಿ ಬಂದು ಅಪ್ಪಿಕೊಂಡು ಕಣ್ಣೀರಾದಳು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಿವ್ಯಾ-ರಾಜೇಶ್ ಹಾಗರಗಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ತಾಯಿಯನ್ನು ನೋಡಲು ಕುಟುಂಬದವರೊಂದಿಗೆ ಬಂದಿದ್ದರು. ಮಕ್ಕಳಿಗೆ ತಾಯಿಯೇ ಬುದ್ಧಿವಾದ ಹೇಳಬೇಕು. ಆದರೆ ಇಲ್ಲಿ ಮಕ್ಕಳೇ ತಾಯಿಗೆ ಬುದ್ಧಿವಾದ ಹೇಳಿರುವುದು ವಿಪರ್ಯಾಸ. ಇಂತಹ ಸ್ಥಿತಿ ಯಾವ ತಂದೆ ತಾಯಿಗೂ ಬಾರದಿರಲಿ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು.