BREAKING NEWS:
ಬೆಂಗಳೂರು: ಭಾರಿ ಮಳೆಗೆ ಸೂರು ಕಳೆದುಕೊಂಡ ಕಮಲವ್ವನಿಗೆ ಗಣೇಶ ಹಬ್ಬವನ್ನೂ ಸಂಭ್ರಮಿಸಲಾಗದ ಸಂಕಟ. ಅಂದು ಖಾಸಗಿವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಜನರ ಸಂಕಷ್ಟ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದ ಮುಖ್ಯಮಂತ್ರಿಗಳನ್ನು ಕಂಡು ಕಮಲವ್ವನೂ ತನ್ನ ಸಂಕಷ್ಟ ತೋಡಿಕೊಂಡಳು.“ಇಬ್ಬರೂ ಗಂಡುಮಕ್ಕಳು ಸತ್ತ ಹೋಗ್ಯಾರ, ಮನಿ ಕಟ್ಟಸಿಕೊಡ್ರಿ ಸಾಹೇಬ್ರ” ಎಂದು ಗದ್ಗದಿತಳಾಗಿ ನುಡಿದ ಕಮಲವ್ವನಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಮಲವ್ವ ಸ್ವಂತ ಸೂರಿನಡಿ ಸಂಕ್ರಾಂತಿ ಆಚರಿಸುವಂತೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾಂವಿಯ ಮಂಚಿನಕೊಪ್ಪ ಗ್ರಾಮದ ಕಮಲವ್ವ ತಿಮ್ಮನಗೌಡ್ರ ತಮಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾಲ್ಕೇ ತಿಂಗಳಿನಲ್ಲಿ ಮನೆ ನಿರ್ಮಿಸಿ, ಸಂಕ್ರಾಂತಿಯಂದು ಕಮಲವ್ವನಿಗೆ ಮನೆಯನ್ನು ಹಸ್ತಾಂತರಿಸಲಾಯಿತು.
ಹ್ಯಾಬಿಟ್ಯಾಟ್ ಸೆಂಟರ್ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಸವಣೂರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಹಸ್ತಾಂತರಿಸಿದರು.