BREAKING NEWS:
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದ ಮುಂದುವರೆದಿದ್ದು ಸಾವಿರಾರು ಅಮಾಯಕ ಜೀವಗಳು ಕಣ್ಣು ಮುಚ್ಚಿವೆ. ಕಳೆದ ವಾರ ಉಕ್ರೇನ್ನ ಥಿಯೇಟರ್ ನಲ್ಲಿ ಆಶ್ರಯ ಪಡೆದಿದ್ದ ಸುಮಾರು 300 ಜನರನ್ನ ರಷ್ಯಾ ಬಲಿ ಪಡೆದುಕೊಂಡಿದೆ ಎಂದು ಮಾರಿಯೋಪೋಲ್ ನಲ್ಲಿರುವ ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ವಿಮಾನದ ದಾಳಿಯ ಬಳಿಕ ಮಾರಿಯೋಪೋಲ್ ನಾಟಕ ಥಿಯೇಟರ್ ನಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ನೀಡಿದ್ದಾಗಿ ಮಾರಿಯೋಪೋಲ್ ಸಿಟಿ ಹಾಲ್ ಟೆಲಿಗ್ರಾಮ್ ನಲ್ಲಿ ಬರೆಯಲಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕಳೆದ ವಾರ ನೂರಾರು ಜನರು ಕಟ್ಟಡದಲ್ಲಿ ಆಶ್ರಯ ಪಡೆದಿರೋದಾಗಿ ತಿಳಿಸಿದ್ದಾರೆ. ಕಟ್ಟಡದಲ್ಲಿ ದಾಳಿಯ ಸಂದರ್ಭದಲ್ಲಿ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಇದ್ದರು. ಮುತ್ತಿಗೆ ಹಾಕಿದ ನಗರದಲ್ಲಿ ಸುಮಾರು 100,000 ಜನರು ಆಹಾರ, ನೀರು ಇಲ್ಲದೆ ಸಿಕ್ಕಿಬಿದ್ದಿದ್ದು, ರಷ್ಯಾ ಪಡೆಗಳ ಉಗ್ರ ಶೆಲ್ ದಾಳಿಯನ್ನು ಸಹಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ರಷ್ಯಾದ ದಕ್ಷಿಣ ಗಣರಾಜ್ಯದ ಚೆಚೆನ್ಯಾದ ಪಡೆಗಳು ಮಾರಿಯೋಪೋಲ್ ಸಿಟಿ ಹಾಲ್ ಅನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು,ರಷ್ಯಾದ ಧ್ವಜವನ್ನು ಹಾರಿಸಿದವು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.