POLITICS:
ಬೆಳಗಾವಿ: ಪಕ್ಷ ಯಾವುದೇ ಇರಲಿ, ಸರಕಾರ ಯಾವುದೇ ಬರಲಿ. ಆದರೆ ಗೋಕಾಕದ ಜಾರಕಿಹೊಳಿ ಸಹೋದರರಲ್ಲಿ ಒಬ್ಬರು ಸಂಪುಟದಲ್ಲಿರಲೇಬೇಕು. ಇದು ಕಳೆದ ಸುಮಾರು 2 ದಶಕದಿಂದಲೂ ನಡೆದು ಬಂದ ಪದ್ಧತಿ.
ಆದರೆ 2004ರಿಂದೀಚೆಗೆ ಇದೇ ಮೊದಲ ಬಾರಿಗೆ ಕುಟುಂಬದ ಮೂವರು ಶಾಸಕರಿದ್ದರೂ, ಬಿಜೆಪಿಯವರೇ ಇಬ್ಬರಿದ್ದರೂ ಯಾರೊಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳದೆ ಸರಕಾರ ಅಸ್ಥಿತ್ವಕ್ಕೆ ಬಂದಿದೆ. ಜಾರಕಿಹೊಳಿ ಕುಟುಂಬವನ್ನು ಹೊರಗಿಟ್ಟು ಸರಕಾರ ರಚಿಸುವ ಸಾಹಸಕ್ಕೆ ಬಿಜೆಪಿ ಹೈಕಮಾಂಡ್ ಕೈಹಾಕಿದೆ.
2004ರಿಂದ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಎನ್ನುವಂತೆ ಜಾರಕಿಹೊಳಿ ಕುಟುಂಬದ ಮೂವರು ಸಹೋದರರಲ್ಲಿ ಒಬ್ಬರಾದರೂ ಸಚಿವಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದರು. ಅವರಾಗಿಯೇ ರಾಜಿನಾಮೆ ನೀಡಿ ಹೊರಹೋಗಿದ್ದಿದೆ, ಆದರೆ ಅವರನ್ನು ಹೊರಗಿಟ್ಟು ಸಚಿವಸಂಪುಟ ರಚಿಸಿದ ಉದಾಹರಣೆ ಇರಲಿಲ್ಲ.
2003ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯ ಧರ್ಮಸಿಂಗ್ ಸರಕಾರದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಆಗ ಸರಿಯಾದ ಖಾತೆ ಸಿಗಲಿಲ್ಲ ಎಂದು ಅಸಮಾಧಾನಗೊಂಡು 2005ರಲ್ಲಿ ರಾಜಿನಾಮೆ ನೀಡಿದ್ದರು.
2006ರಲ್ಲಿ ಜೆಡಿಎಸ್ – ಬಿಜೆಪಿ ಸರಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಮಂತ್ರಿಯಾದರು. 2008ರಲ್ಲಿ ಆಪರೇಶನ್ ಕಮಲದ ಮೂಲಕ ಜೆಡಿಎಸ್ ನಿಂದ ಬಿಜೆಪಿ ಸೇರಿ ಬಾಲಚಂದ್ರ ಜಾರಕಿಹೊಳಿ ಮತ್ತೆ ಮಂತ್ರಿಯಾದರು.
ಇನ್ನು ಸಿದ್ದಾರಾಮಯ್ಯ ಸರ್ಕಾರ, ಕುಮಾರಸ್ವಾಮಿ ಸರ್ಕಾರ ಅದರಂತೆ ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ಕ್ರಮವಾಗಿ ಮಂತ್ರಿಗಿರಿ ಇವರ ಪಾಲಿಗೆ ಒಲಿದು ಬರುತ್ತಿತ್ತು, ಸದ್ಯ ಬೊಮ್ಮಾಯಿ ಸರ್ಕಾರದಲ್ಲಿ ಸೈಡ್ ಲೈನ್ ಆಗಿರುವ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿಗೆ ಮುಂದೆ ಏನಾದ್ರು ಅದೃಷ್ಟ ಕೈ ಹಿಡಿಯಲಿದ್ದೀಯಾ ಅಂತ ಕಾದು ನೋಡಬೇಕಿದೆ
ಇನ್ನು ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ಒಂದು ಸಿಡಿ ಕೇಸ್ ನಿಂದ ಇಷ್ಟೆಲ್ಲಾ ಕಷ್ಟಗಳನ್ನ ಜಾರಕಿಹೊಳಿ ಸಹೋದರರು ಎದುರಿಸುತ್ತಿದ್ದಾರೆ,ಸಿಡಿ ಕೇಸ್ ಇನ್ನಷ್ಟು ತಿರುವಗಳನ್ನ ಪಡೆದುಕೊಂಡರೆ ರಮೇಶ್ ಜಾರಕಿಹೊಳಿ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ