POLITICS:
ಚಿತ್ರದುರ್ಗ: ಕಾಂಗ್ರೆಸಿಗೆ ದಲಿತರ ಮೇಲೆ ಪ್ರೀತಿ, ಅಭಿಮಾನವಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲೆಸೆದಿದ್ದಾರೆ.
ಚಿತ್ರದುರ್ಗದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಸಂಗೀತ ಕುರ್ಚಿ ಆರಂಭಿಸಿದ್ದಾರೆ. ದಲಿತ ಮುಖ್ಯಮಂತ್ರಿ ಕುರಿತ ಚರ್ಚೆಯೂ ನಡೆಯತೊಡಗಿದೆ ಎಂದರು.
ಹಿಂದೆ ಡಾ.ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಕಾಂಗ್ರೆಸ್ ಪಕ್ಷವೇ ಅವರನ್ನು ಸೋಲಿಸಿತ್ತು. ಅವರ ಶವಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಈಗ ದಲಿತರ ಅಭ್ಯುದಯದ ಬಗ್ಗೆ ಮಾತನಾಡುತ್ತಾರೆ. ಅಂಬೇಡ್ಕರರ ಪಂಚತೀರ್ಥಗಳಿಗೆ ರಕ್ಷಣೆ ನೀಡಿ ಅಭಿವೃದ್ಧಿಗೊಳಿಸಿದ್ದು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ಉತ್ತಮ ಆಡಳಿತ ಕೊಟ್ಟಿದ್ದಾರೆ. ಕಳೆದ 45 ವರ್ಷಗಳಿಂದ ರೈತಪರ ಹೋರಾಟ ನಡೆಸಿ, ಪಾದಯಾತ್ರೆ ಮೂಲಕ ಪಕ್ಷವನ್ನು ಬೆಳೆಸಿದ್ದಾರೆ. ಆಡಳಿತಾವಧಿಯಲ್ಲಿ ಎಸ್ಸಿ ಎಸ್ಟಿ ಜನಾಂಗಕ್ಕೆ ಜಾಗ ಕೊಟ್ಟಿದ್ದಾರೆ. ಗೋಹತ್ಯೆ ನಿಷೇಧ, ಕೃಷಿ ಸಂಸ್ಕೃತಿ ಉಳಿಸುವ ಕಾರ್ಯ ನಡೆದಿದೆ. ಪ್ರತೀ ಜಿಲ್ಲೆಯಲ್ಲೂ ಗೋಶಾಲೆ ತೆರೆಯುವ ನಿರ್ಧಾರವನ್ನು ಯಡಿಯೂರಪ್ಪ ಸರ್ಕಾರ ಮಾಡಿದೆ. ಜನರ ಕಷ್ಟದ ಅರಿವು ಅವರಿಗಿದೆ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಕುಟುಂಬಸ್ಥರ ಬದುಕು ಉಳಿಸುವ ಕಾರ್ಯ ನಡೆದಿದೆ ಹೀಗಾಗಿ ಯಡಿಯೂರಪ್ಪ ಅವರು ಅಭಿನಂದನಾರ್ಹರು ಎಂದರು.
ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ಬಿಜೆಪಿ ಮುಂದಿನ ಬಾರಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಇನ್ನು ಕನಸು ಕಾಣುವುದನ್ನು ಬಿಡಲಿ ಎಂದು ಲೇವಡಿ ಮಾಡಿದರು.