POLITICS:
ಚಿಕ್ಕಮಗಳೂರು: ಪ್ರಚೋದನಕಾರಿ ದುರಹಂಕಾರದ ಪರಮಾವಧಿಯ ಭಾಷಣ ಮಾಡಿರುವ ಸಚಿವ ಅಶ್ವತ್ಥನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಕಾರ್ತಿಕ್ ಚೆಟ್ಟಿಯಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ, ರಾಮನಗರದ ಸರ್ಕಾರಿ ಕಾರ್ಯಕ್ರಮದಲ್ಲಿ ಗದ್ದಲ ಹಾಗೂ ಗೊಂದಲ ಉಂಟಾಗಲು ಸಚಿವ ಅಶ್ವತ್ಥ ನಾರಾಯಣ ಕಾರಣರಾಗಿದ್ದಾರೆ. ಯಾವ ವೇದಿಕೆಯಲ್ಲಿ ಏನು ಮಾತನಾಡಬೇಕು, ಯಾವ ರೀತಿ ಮಾತನಾಡಬೇಕು, ಯಾರಿಗೆ ಹೇಗೆ ಗೌರವ ಕೊಡಬೇಕು ಎಂಬ ಪರಿಜ್ಞಾನವಲ್ಲದೇ ಬೇಕಾ ಬಿಟ್ಟಿಯಾಗಿ ನಾಲಗೆ ಹರಿಬಿಟ್ಟು ಸಂವಿಧಾನಕ್ಕೆ ವಿರೋಧದ ಹೇಳಿಕೆ ನೀಡಿದ್ದಾರೆ ಎಂದರು.
ರಾಜಕೀಯ ಅಥವಾ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಜೈಕಾರ ಹಾಕುವವರು ಹಾಗೂ ಧಿಕ್ಕಾರ ಕೂಗುವವರು ಇದ್ದೇ ಇರುತ್ತಾರೆ. ಪ್ರಬುದ್ಧ ರಾಜಕಾರಣಿಗಳಿಗೆ ಇಂತಹ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಅರಿವಿರಬೇಕು. ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವಿರಬೇಕು ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಕೂಡ ಆ ರೀತಿ ಮಾತನಾಡುವುದು ಬೇಡ ನಿಲ್ಲಿಸಿ ಎಂದು ಸಚಿವರಿಗೆ ಸನ್ನೆ ಮಾಡಿದರೂ ಅವರು ನಿಲ್ಲಿಸಲಿಲ್ಲ. ಹೀಗಾಗಿ ಇಂತಹ ಸಚಿವ ಅಶ್ವತ್ಥನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.