POLITICS:
ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘಿಸಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಜರುಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಉತ್ತರಿಸಿದ ಅವರು, ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ನಾನು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನಮ್ಮ ಪಕ್ಷದ ನಿಯೋಗ ಅವರನ್ನು ಭೇಟಿ ಮಾಡಿತ್ತು. ಈ ವಿಚಾರವಾಗಿ ಗುರುವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿ, ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಕ್ರಮ ಕ್ರಮೈಗೊಳ್ಳದಿದ್ದರೆ, ಅವರ ವಿರುದ್ಧ ಹೋರಾಟ ಮಾಡಲು ಕಾರ್ಯತಂತ್ರ ರೂಪಿಸುತ್ತೇವೆ ಎಂದರು.
ಕೇವಲ ನಮ್ಮ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಆಡಳಿತ ಪಕ್ಷದವರ ವಿರುದ್ಧ ಪ್ರಕರಣ ದಾಖಲಿಸದಿದ್ದರೆ, ನಾವು ಸುಮ್ಮನೆ ಕೂರುವುದಿಲ್ಲ. ನಾವು ಏನು ಹೋರಾಟ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಶಿವಕುಮಾರ್ ಗುಡುಗಿದರು.
ಕೇವಲ ಒಬ್ಬರ ಮೇಲೆ ಪ್ರಕರಣ ದಾಖಲಿಸುವುದಲ್ಲ. ನಿಯಮ ಉಲ್ಲಂಘಿಸಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ, ನಿಯಮ ಉಲ್ಲಂಘಿಸಿರುವವರ ಪಟ್ಟಿ ತರಿಸಿಕೊಂಡು, ಆಯಾ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದೂ ಅವರು ಹೇಳಿದರು.
ಬಿಜೆಪಿಯಲ್ಲೇ ಕೋವಿಡ್ ನಿರ್ಬಂಧದ ಬಗ್ಗೆ ಗೊಂದಲ ಸೃಷ್ಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಜನರ ಪ್ರಾಣ ತೆಗೆಯುತ್ತಿದ್ದಾರೆ. ಬದುಕಿರುವವರನ್ನು ಸಾಯಿಸುತ್ತಿದ್ದಾರೆ. ವ್ಯಾಪಾರ, ವಹಿವಾಟು ಏನಾಗಬೇಕು? ವಿದೇಶಗಳಲ್ಲಿ ಯಾವುದೇ ನಿರ್ಬಂಧ ಬೇಡ ಎಂದು ತೀರ್ಮಾನಿಸಿದ್ದಾರೆ. ನಾನು ಹೈದರಾಬಾದ್ ಗೆ ಹೋಗಿದ್ದೆ, ಅಲ್ಲಿ ಯಾವುದೇ ನಿರ್ಬಂಧವಿಲ್ಲ. ಸರ್ಕಾರ ಇಲ್ಲಿ ಯಾಕೆ ಜನಸಾಮಾನ್ಯರಿಗೆ ಈ ರೀತಿ ಸುಮ್ಮನೆ ತೊಂದರೆ ನೀಡುತ್ತಿದೆ? ಆರೋಗ್ಯದ ವಿಚಾರದಲ್ಲಿ ಅಗತ್ಯವಾದ ಕ್ರಮ ಕೈಗೊಳ್ಳಲಿ, ಆದರೆ ಅವರ ದಿನನಿತ್ಯದ ಬದುಕಿನ ಸಂಪಾದನೆ ಹಾಳು ಮಾಡುವುದೇಕೆ? ಬ್ಯಾಂಕ್ ನವರು ಅವರಿಗೆ ನೀಡಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುತ್ತಾರಾ? ಅಥವಾ ಸರ್ಕಾರದವರು ಅವರ ಬಾಡಿಗೆಯನ್ನಾದರೂ ಮನ್ನಾ ಮಾಡುತ್ತಾರಾ? ವ್ಯಾಪಾರಸ್ಥರು, ಹೊಟೇಲ್ ಉದ್ಯಮದವರು ಏನಾಗಬೇಕು? ಹೊಟೇಲ್ ಕ್ಷೇತ್ರದವರು ಕೇಳುತ್ತಿರುವುದರಲ್ಲಿ ಅರ್ಥವಿದೆ ಎಂದರು.
ನಲಪಾದ್ ಪಾತ್ರವಿಲ್ಲ: ಡಿಕೆಶಿ
ಯೂತ್ ಕಾಂಗ್ರೆಸ್ ನಲ್ಲಿ ಗಲಾಟೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಯುವ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಗಲಾಟೆಗಳು ಆಗಿಲ್ಲ. ನಾನು ಆ ಹುಡುಗನ ಬಳಿ ಮಾತನಾಡಿ ಪರಿಶೀಲನೆ ನಡೆಸಿದ್ದು, ಯಾವುದೇ ಗಲಾಟೆ ನಡೆದಿಲ್ಲ. ಯಾರಾದರೂ ಕೆಲಸ ಮಾಡುತ್ತಿದ್ದಾರೆ ಎಂದರೆ ಅಂತಹವರ ವಿರುದ್ಧ ಈ ರೀತಿ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ. ಈ ಘಟನೆ ಹಿಂದೆ ಯುವ ನಾಯಕ ಮುಹಮ್ಮದ್ ನಲಪಾದ್ ಇಲ್ಲ, ಬೇರೆ ಯಾರೂ ಇಲ್ಲ. ರಾಜಕೀಯವಾಗಿ ಯಾರಾದರೂ ಶಿಸ್ತು ಉಲ್ಲಂಘಿಸಿದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಆದರೆ ಅವರ ವೈಯಕ್ತಿಕ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.