POLITICS:
ನವದೆಹಲಿ: ಕಳೆದ ವಾರದ ಕೊನೆಯಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ಸಿಕ್ಕಾಪಟ್ಟೆ ಹರಿದಾಡಿತ್ತು, ನ್ಯೂಯಾರ್ಕ್ ಟೈಮ್ಸ್ ಮೊದಲ ಪುಟವನ್ನು ಹೋಲುತ್ತಿದ್ದ ಆ ಚಿತ್ರ ಪ್ರಧಾನಿ ಮೋದಿಯ ದೊಡ್ಡ ಫೋಟೊವನ್ನೂ 'ಲಾಸ್ಟ್, ಬೆಸ್ಟ್ ಹೋಪ್ ಆಫ್ ದಿ ಅರ್ಥ್' ಎಂಬ ಹೆಡ್ಡಿಂಗ್ನ್ನೂ ಹೊಂದಿತ್ತು. 'ವಿಶ್ವದ ಅತ್ಯಂತ ಪ್ರೀತಿಪಾತ್ರ ಮತ್ತು ಅತ್ಯಂತ ಪ್ರಭಾವಿ ನಾಯಕ ನಮ್ಮನ್ನು ಹರಸಲು ಇಲ್ಲಿದ್ದಾರೆ' ಎಂಬ ಸಾಲೂ ಆ ಹೆಡ್ಡಿಂಗ್ನ ಕೆಳಗೇ ಇತ್ತು.
ಸೆಪ್ಟೆಂಬರ್ 24-25ರ ಮೋದಿ ಅಮೆರಿಕಾ ಪ್ರವಾಸವನ್ನು ಕುರಿತು ನ್ಯೂಯಾರ್ಕ್ ಟೈಮ್ಸ್ನ ಸೆಪ್ಟೆಂಬರ್ 26 ಸಂಚಿಕೆಯಲ್ಲಿ ಮೊದಲ ಪುಟದ ವರದಿ ಎಂದು ಬಿಂಬಿಸುತ್ತಿದ್ದ ಈ ಚಿತ್ರದ ಜಾತಕ ಇದೀಗ ಬಯಲಾಗಿದೆ.
ಟ್ವಿಟರ್, ಫೇಸ್ಬುಕ್, ವಾಟ್ಸ್ಯಾಪ್ ಮೊದಲಾದೆಡೆಗಳಲ್ಲಿ ಬಿಜೆಪಿಯವರೂ ಸೇರಿದಂತೆ ಮೋದಿ ಬೆಂಬಲಿಗರೆಲ್ಲಾ ಈ ಚಿತ್ರವನ್ನು ಹಂಚಿಕೊಳ್ಳುತ್ತ ಸಂಭ್ರಮಿಸುತ್ತಿದ್ದ ಬೆನ್ನಲ್ಲೇ, ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ಹುಡುಕಾಟಕ್ಕಿಳಿದವು. ಕ್ಯಾಪಿಟಲ್ ಅಕ್ಷರಗಳಲ್ಲಿದ್ದ ಹೆಡ್ಲೈನ್ ಮತ್ತದರ ಕೆಳಗಿನ ಸಾಲು ನೈಊಯಾರ್ಕ್ ಟೈಮ್ಸ್ನ ಸ್ಟೈಲ್ಶೀಟ್ ಅಲ್ಲವೆಂಬುದು ದೃಢವಾಯಿತು. ಅದಕ್ಕಿಂತ ಮುಖ್ಯವಾಗಿ, ಮೊದಲ ಪುಟ ಹಾಗಿರಲಿ, ತನ್ನ ಸೆಪ್ಟೆಂಬರ್ 26 ಸಂಚಿಕೆಯಲ್ಲಿಯೇ ನ್ಯೂಯಾರ್ಕ್ ಟೈಮ್ಸ್ ಮೋದಿ ಕುರಿತ ಯಾವ ವರದಿಯನ್ನೂ ಪ್ರಕಟಿಸಿರಲಿಲ್ಲ.
ಆ ಫೇಕ್ ಚಿತ್ರದ ಸಮೀಪದ ನೋಟದಿಂದ ಅದನ್ನು ಸೃಷ್ಟಿಸಿದವರು ಮಾಡಿದ್ದ ಮತ್ತೂ ಒಂದು ಯಡವಟ್ಟು ಬಯಲಾಗಿತ್ತು. ಸಂಚಿಕೆಯ ದಿನಾಂಕವನ್ನು ಉಲ್ಲೇಖಿಸುವಾಗ ಸ್ಪೆಲ್ಲಿಂಗ್ ತಪ್ಪಾಗಿತ್ತು. 26 September ಎಂಬುದರ ಬದಲಿಗೆ 26 “Setpember” ಎಂಬ ತಪ್ಪು ನಗು ತರಿಸಿತ್ತು.
ಬುಧವಾರ ಇದೆಲ್ಲಾ ನ್ಯಾಯಾರ್ಕ್ ಟೈಮ್ಸ್ ಗಮನಕ್ಕೂ ಬಂದಿದ್ದೇ ತಡ, ವೈರಲ್ ಆಗಿರುವ ಚಿತ್ರ ನಕಲಿಯೆಂದೂ, ಮೋದಿ ಕುರಿತ ಯಾವ ವರದಿಯನ್ನೂ ಪ್ರಕಟಿಸಿಲ್ಲವೆಂದೂ ಟ್ವೀಟ್ ಮೂಲಕ ಹೇಳಿದೆ.
ನ್ಯೂಯಾರ್ಕ್ ಟೈಮ್ಸ್ನ ಕಮ್ಯುನಿಕೇಷನ್ ವಿಂಗ್ನ ಟ್ವಿಟರ್ ಹ್ಯಾಂಡಲ್, ಇದು ನಕಲಿ ಚಿತ್ರವೆಂದು ಹೇಳುವುದರ ಜೊತೆಗೇ, ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮದ ಅಗತ್ಯವಿದೆ ಎಂದೂ ಸಲಹೆ ನೀಡಿದೆ. ಮೋದಿಯ ಬಗ್ಗೆ ಪ್ರಸ್ತಾಪವಿದ್ದ ತನ್ನ ಇತ್ತೀಚಿನ ವರದಿಗಳ ಪಟ್ಟಿಯನ್ನೂ ಅದು ಕೊಟ್ಟಿದೆ.