SPECIAL:
ರಾಜೇಶ್ ಕೊಂಡಾಪುರ
ರಾಮನಗರ: ಹವಾಮಾನ ವೈಫರಿತ್ಯದಿಂದಾಗಿ ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ಸುಳಿ ಕೊಳೆಯುವ ರೋಗ ಕಾಣಿಸಿಕೊಂಡಿದ್ದು, ತೆಂಗು ಮತ್ತು ಅಡಿಕೆ ಬೆಳೆಗಾರರಲ್ಲಿ ಚಿಂತೆಯ ಕಾರ್ಮೋಡ ಕವಿದಿದೆ.
ಜಿಲ್ಲೆಯ ಮಾಗಡಿ ತಾಲೂಕಿನ ಸಂಕಿಘಟ್ಟ ಪಂಚಾಯಿತಿ ವ್ಯಾಪ್ತಿಯ ಮಂಗಿಪಾಳ್ಯ, ತಿಪ್ಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅಣ್ಣೇಶಾಸ್ತ್ರಿ ಪಾಳ್ಯ ಭಾಗಗಳಲ್ಲಿ ತೆಂಗು ಮತ್ತು ಅಡಿಕೆಗೆ ಸುಳಿ ಕೊಳೆ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಜಿಲ್ಲೆ ಚನ್ನಪಟ್ಟಣ ಮತ್ತು ಕನಕಪುರ ತಾಲೂಕಿನ ಹಲವೆಡೆ ತೆಂಗಿಗೆ ಸುಳಿ ಕೊಳೆ ರೋಗದ ಜೊತೆಗೆ ಗರಿ ರೋಗವು ಕಾಣಿಸಿಕೊಂಡಿದೆ.
ತೆಂಗಿಗೆ ಸುಳಿ ಕೊಳೆ ರೋಗ ಬರಲು ರೈನೋಸರಸ್ ದುಂಬಿಯ ಹಾವಳಿ, ಕೆಂಪು ಮೂತಿ ಹುಳುಗಳ ಕಾಟದಿಂದ ಹಾನಿಯಾಗುತ್ತಿದೆ ಎನ್ನುವುದನ್ನು ತೋಟಗಾರಿಕಾ ಇಲಾಖೆ ಗುರುತಿಸಿದೆ. ನುಸಿ ಮತ್ತು ಗರಿ ರೋಗ ಮತ್ತು ಕಡು ಬೇಸಿಗೆಯಿಂದ ಈಗಾಗಲೇ ಜಿಲ್ಲೆಯಲ್ಲಿ ತೆಂಗಿನ ತೋಟಗಳು ಸಾಕಷ್ಟು ಹಾಳಾಗಿದ್ದು, ಈಗ ನೀರಾವರಿ ಇರುವ ಪ್ರದೇಶದಲ್ಲಿ ಹೊಸದಾಗಿ ತೆಂಗು ನಾಟಿ ಮಾಡಲಾಗುತ್ತಿದೆ. ದೊಡ್ಡದೊಡ್ಡ ತೆಂಗಿನ ಮರಗಳ ಜೊತೆಗೆ ಹೊಸದಾಗಿ ನೆಡಲಾಗಿರುವ ತೆಂಗಿನ ಸಸಿಗಳಿಗೂ ರೋಗ ತಗುಲಿರುವ ಬಗ್ಗೆ ವರದಿ ಬರುತ್ತಿವೆ.
ಸಾಮಾನ್ಯವಾಗಿ ಸುಳಿ ಕೊಳೆ ರೋಗವು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಂಡುಬರುವುದಾದರೂ ಬೇಸಿಗೆಯಲ್ಲಿಯೂ ತೆಂಗಿಗೆ ಸುಳಿ ಕೊಳೆ ರೋಗ ಕಂಡು ಬಂದಿರುವುದು ತೆಂಗು ಕೃಷಿಕರನ್ನು ಹೈರಾಣಾಗಿಸಿದೆ. ಸುಳಿ ಕೊಳೆ ರೋಗದಿಂದ ಉತ್ತಮ ಫಲ ನೀಡುವ ತೆಂಗಿನ ಮರಗಳು ಕೂಡ ನಾಶವಾಗುತ್ತಿದ್ದು, ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಉಂಟಾಗುತ್ತಿದೆ.
ಇನ್ನು ಕೆಲವು ತೋಟಗಳಲ್ಲಿ ಯಾವಾಗಲೂ ಅದರ ಬಾದೆ ತಪ್ಪುವುದಿಲ್ಲ. ಪ್ರಾರಂಭದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಅದು ಗಂಭೀರ ಸ್ವರೂಪ ಪಡೆದು ಇಡೀ ತೆಂಗಿನ ತೋಟದ ನಾಶಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ತೆಂಗಿನೊಟ್ಟಿಗೆ ಅಡಿಕೆಯನ್ನು ಬಿತ್ತನೆ ಮಾಡಿರುವ ತೋಟಗಳಲ್ಲಿ ಅಡಿಕೆಗೂ ಕೂಡ ಈ ರೋಗ ಅಂಟಿಕೊಳ್ಳುತ್ತಿದೆ.
ತೆಂಗಿನ ಮರದ ಮೇಲ್ಭಾಗದಲ್ಲಿನ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಮಳೆಗಾಲದ ಆರಂಭಕ್ಕೆ ಮುನ್ನ ಬೋಡೋ ಮತ್ತಿತರ ಔಷಧಿಗಳನ್ನು ಸಿಂಪಡಿಸಿದರೆ ಸುಳಿ ಕೊಳೆ ರೋಗವನ್ನು ತಡೆಗಟ್ಟಬಹುದು. ರೋಗ ತಗುಲಿ ಬದುಕಿಸಲು ಸಾಧ್ಯವಿಲ್ಲದ ಮತ್ತು ಸಂಪೂರ್ಣ ನಾಶದ ಅಂಚಿಗೆ ತಲುಪಿರುವ ತೆಂಗಿನ ಮರಗಳನ್ನು ಕಡಿದು ನಾಶಪಡಿಸುವುದು ಉತ್ತಮ. ಪ್ರಾರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿದರೆ ರೋಗ ಬಾದೆ ಕಾಣಿಸಿಕೊಂಡ ಸಿರಿಯನ್ನು ತುಂಡರಿಸಿ ಔಷಧಿ ಸಿಂಪಡಿಸಿ ನೀರು ತಾಗದಂತೆ ಪ್ಲಾಸ್ಟಿಕನ್ನು ಕಟ್ಟಿದರೆ ರೋಗ ಹರಡುವುದು ತಡೆಯಬಹುದು. ಅಲ್ಲದೆ ತೆಂಗಿನ ತೋಟವನ್ನು ಸ್ವಚ್ಛವಾಗಿರಿಸುವುದರಿಂದಲೂ ತೆಂಗಿಗೆ ಬಾದಿಸುವ ಸುಳಿ ಕೊಳೆ ರೋಗವನ್ನು ತಡೆಗಟ್ಟಬಹುದು ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು.
ಭಯ ಬೇಡ: ತೆಂಗು ಬೆಳೆದ ರೈತರು ಹೆದರುವುದು ಬೇಡ. ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಲು ಸಿದ್ಧವಾಗಿದ್ದೇವೆ. ಇಂತಹ ರೋಗಗಳು ಹವಾಮಾನ ವೈಫರಿತ್ಯ ಹಾಗೂ ಶೀಲಿಂದ್ರ ಸೋಂಕಿನಿಂದ ವಾತಾವರಣದಲ್ಲಿ ಉಷ್ಣತೆ ಕೊರತೆಯಾದಾಗ, ಸುಳಿ ಕೊಳೆಯುವ ರೋಗ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ಮಾಗಡಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್.
ಒಟ್ಟಾರೆ ತೆಂಗು ಮತ್ತು ಅಡಿಕೆಗೆ ಸುಳಿ ಕೊಳೆಯುವ ರೋಗ ರಾಮನಗರ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬೆಳೆಗಾರರು ಈ ಬಗ್ಗೆ ಗಮನ ನೀಡಿ, ಆರಂಭದಲ್ಲಿಯೇ ರೋಗ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದ ಬೆಳೆಗಳನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ