SPECIAL:
ಭಾರತದ ಪಿಂಕ್ ಸಿಟಿ ಜೈಪುರದ ಬಗ್ಗೆ ಕೇಳಿದ್ದೀರಾ?: ಅಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದು ಕಥೆ. ರಾಜಸ್ಥಾನದ ರಾಜಧಾನಿ ಜೈಪುರ “ಪಿಂಕ್ ಸಿಟಿ” ಎಂದೇ ಖ್ಯಾತಿ ಪಡೆದಿದೆ. ಇಲ್ಲಿನ ಕಲೆ, ಇತಿಹಾಸ, ಕಟ್ಟಡಗಳ ವಿನ್ಯಾಸ, ಕೋಟೆಗಳು, ವಾಸ್ತು, ಅರಮನೆಗಳು ಎಲ್ಲವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಜೈಪುರದ ಇಡೀ ಪಟ್ಟಣ ಪಿಂಕ್ ಬಣ್ಣದಲ್ಲಿ ಮಿಂದೆದ್ದಿದೆ. ಇಷ್ಟೇ ಅಲ್ಲ, ಈ ಸ್ಥಳವನ್ನು “ಫೋಟೋಗ್ರಾಫರ್ ಸ್ವರ್ಗ ” ಎಂದು ಕರೆಯಲಾಗುತ್ತದೆ.
ಇಲ್ಲಿನ ಪ್ರತಿ ಕಟ್ಟಡಕ್ಕೂ ಪಿಂಕ್ ಬಣ್ಣ ಹಚ್ಚಲು ಮುಖ್ಯ ಕಾರಣವಿದೆ. ಅದೇನೆಂದರೆ, ನಗರದ ಸವಾಯಿ ರಾಮ್ ಸಿಂಗ್ ಎಂಬ ರಾಜನ ಪ್ರಭಾವ. 1876 ರಲ್ಲಿ, ರಾಣಿ ವಿಕ್ಟೋರಿಯಾ ಅವರ ಮಗ, ಆಲ್ಬರ್ಟ್ ಎಡ್ವರ್ಡ್, ಪ್ರಿನ್ಸ್ ಆಫ್ ವೇಲ್ಸ್ ಭಾರತಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಪಿಂಕ್ ಆತಿಥ್ಯದ ಬಣ್ಣವೆಂದು ಪರಿಗಣಿಸಿದ್ದರಿಂದ, ಮಹಾರಾಜ ರಾಮ್ ಸಿಂಗ್ ಅವರು ಇಡೀ ನಗರವನ್ನು ಪಿಂಕ್ ಬಣ್ಣದಿಂದ ಚಿತ್ರಿಸಿದರು. ಇದು ತಮ್ಮ ರಾಯಲ್ ಗೆಸ್ಟ್ ವೆಲ್ಕಮ್ ಮಾಡುವ ಉದ್ದೇಶದಿಂದ ಮಾಡಲಾಗಿತ್ತು. ಲಾರ್ಡ್ ಆಲ್ಬರ್ಟ್ ಜೈಪುರವನ್ನು ‘ಗುಲಾಬಿ ನಗರ’ ಎಂದು ಬಣ್ಣಿಸಿದ್ದಾರೆ ಎಂದು ಹೇಳಲಾಗುತ್ತದೆ, ಆದ್ದರಿಂದ ಜೈಪುರಕ್ಕೆ ಪಿಂಕ್ ಸಿಟಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.
ಮಹಾರಾಜ ಸವಾಯಿ ರಾಮ್ ಸಿಂಗ್ ಅವರು ದೇಶದ ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.1877 ರಲ್ಲಿ ಹೊಸ ಕಾನೂನು ಅಂಗೀಕರಿಸಲಾಯಿತು. ಅದರ ಪ್ರಕಾರ ಮುಂದಿನ ಎಲ್ಲ ಕಟ್ಟಡಗಳಿಗೂ ಪಿಂಕ್ ಬಣ್ಣವನ್ನೇ ಬಳಿಯುವಂತೆ ನಿರ್ಧರಿಸಲಾಯಿತು. ಏಕೆಂದರೆ ಪುರಾಣದ ಪ್ರಕಾರ ಜೈಪುರದ ರಾಣಿಯು ಪಿಂಕ್ ಬಣ್ಣವನ್ನು ತುಂಬಾ ಇಷ್ಟಪಡುತ್ತಿದ್ದಳು.
ನಹಾರ್ ಘರ್ ಫೋರ್ಟ್: 1734ರಲ್ಲಿ ಕಟ್ಟಲಾದ ಈ ಕೋಟೆ ಸೂರ್ಯಾಸ್ತದ ಸುಂದರ ದೃಶ್ಯ ನೋಡಲು ಫೇಮಸ್ ಆಗಿದೆ. ಈ ಫೋರ್ಟ್ ಒಳ ಹೋಗಲು ಸುಮಾರು ಎರಡು ಕಿಮೀ ನಡೆಯಬೇಕು.
ಸಿಟಿ ಪ್ಯಾಲೇಸ್: ಈ ಅರಮನೆ ರಾಜಸ್ಥಾನಿ ಹಾಗೂ ಬಾಬರ್ ವಾಸ್ತು ಶಿಲ್ಪ ಹೊಂದಿದೆ. ಇದಕ್ಕೆ ಎರಡು ಎಂಟ್ರೆನ್ಸ್ ಇದ್ದು, ಒಂದು ವೀರೇಂದ್ರ ಪೋಲ್ ಹಾಗೂ ಇನ್ನೊಂದು ಉದಯ್ ಪೋಲ್ ಆಗಿದೆ.
ಹವಾ ಮಹಲ್: ಇದು ಜೈಪುರದ ಅತ್ಯಂತ ಅಚ್ಚರಿಯ ಕಟ್ಟಡವಾಗಿದೆ. 5 ಮಹಡಿಗಳು ಹಾಗೂ 953 ಸಣ್ಣ ಕಿಟಕಿಗಳನ್ನು ಹೊಂದಿದೆ.
ಜಲ್ ಮಹಲ್: ಹೆಸರೇ ಹೇಳುವಂತೆ ಇದು ನೀರಿನ ನಡುವೆ ಇರುವ ಅರಮನೆ ಆಗಿದೆ. ಇದು ಕಾಣಲು ಸಣ್ಣದಂತೆ ಅನಿಸಿದರೂ, ದೊಡ್ಡದಾಗಿದೆ. ನಾಲ್ಕು ಮಹಡಿಗಳು ನೀರಿನಡಿ ಸ್ಥಿತವಾಗಿವೆ.
ಜಂತರ್ ಮಂತರ್: ಮಹಾರಾಜ ಸವಾಯಿ ಸಿಂಗ್ ಅವರ ದೊಡ್ಡ ಇಂಟರೆಸ್ಟಿಂಗ್ ವಿಷಯ ಖಗೋಳಶಾಸ್ತ್ರವಾಗಿತ್ತು. ಆದ್ದರಿಂದ ಅವರು ಋತುಗಳು, ನಕ್ಷತ್ರಗಳು ಮತ್ತು ಸೌರ ಮತ್ತು ಚಂದ್ರ ಗ್ರಹಣಗಳನ್ನು ಲೆಕ್ಕಹಾಕಲು ಐದು ವೀಕ್ಷಣಾಲಯಗಳನ್ನು ನಿರ್ಮಿಸಿದರು. ಇಷ್ಟೇ ಅಲ್ಲದೆ, ಅಲ್ಲಿನ ದಾಸವಾಳದ ಟೀ, ಲಸ್ಸಿ, ದಾಲ್ ಬಲೂಚಿ, ಚಿಕನ್ ಲಾಲಿಪಪ್, ಪಾಲಕ್ ಪನೀರ್, ಪ್ಯಾಜ್ ಕಚೋರಿ ಹಾಗೂ ಪಾಸ್ತಾ ತಮ್ಮ ವಿಶೇಷ ರುಚಿಯಿಂದ ಪ್ರಖ್ಯಾತಿ ಪಡೆದಿವೆ.
ಇದು ಪಿಂಕ್ ಸಿಟಿ ಜೈಪುರದ ಸಿಂಪಲ್ ಸ್ಟೋರಿ. ಒಮ್ಮೆ ಇಲ್ಲಿಗೆ ಪ್ರವಾಸಕ್ಕೆ ಹೋಗಿ ನೋಡಿಕೊಂಡು ಬನ್ನಿ.
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24x7 ಲೈವ್ ಕನ್ನಡ