ENTERTAINMENT:
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ ರೋಣ ಸಿನಿಮಾ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರೋ ಸಿನಿಮಾ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕೊರೊನಾ ಕಂಟಕವಿಲ್ಲದಿದ್ರೆ ಫೆಬ್ರವರಿಯಲ್ಲಿ ಚಿತ್ರ ಅಭಿಮಾನಿಗಳ ಕಣ್ಮನ ಸೆಳೆಯಬೇಕಿತ್ತು. ಆದ್ರೆ ಈ ಮಹಾಮಾರಿಯಿಂದ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದೆ. ಇದೀಗ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಕೇಳಿ ಬರ್ತಿದ್ದು ಗಾಂಧಿನಗರದ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಕ್ರಾಂತ ರೋಣ ಚಿತ್ರಕ್ಕೆ ಒಟಿಟಿ ಇಂದ 100 ಕೋಟಿ ಆಫರ್ ಬಂದಿದೆ ಅನ್ನೋ ಸುದ್ದಿ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಸುದ್ದಿ ಕೇಳಿದ ಸಿನಿ ಪ್ರಿಯರು ಕನ್ನಡ ಚಿತ್ರರಂಗವನ್ನ ವಾರೆವ್ಹಾ ಅಂದಿದ್ರು. ಜೊತೆಗೆ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ರು. ಆದ್ರೆ ಇದೀಗ ಸ್ವತಃ ಚಿತ್ರದ ನಿರ್ಮಾಪಕರು ಇದಕ್ಕೆಲ್ಲಾ ಉತ್ತರ ನೀಡಿದ್ದು ನಿರ್ಮಾಪಕ ಜಾಕ್ ಮಂಜು ಮಾತು ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಯಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾಗೆ ಒಟಿಟಿಯಿಂದ ನೂರು ಕೋಟಿ ಆಫರ್ ಬಂದಿರೋದು ನಿಜ. ಆದ್ರೆ ಚಿತ್ರವನ್ನ ಥಿಯೇಟರ್ ನಲ್ಲೇ ರಿಲೀಸ್ ಮಾಡೋಕೆ ನಿರ್ಧರಿಸಿದ ಕಾರಣ 100 ಕೋಟಿ ಆಫರ್ ನ ರಿಜೆಕ್ಟ್ ಮಾಡಿರೋದಾಗಿ ಜಾಕ್ ಮಂಜು ಹೇಳಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾವನ್ನ 3ಡಿ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಚಿತ್ರವನ್ನ ಒಟಿಟಿಯಲ್ಲಿ ನೋಡಿದರೆ ಪ್ರೇಕ್ಷಕರಿಗೆ 3ಡಿ ಅನುಭವ ಸಿಗುವುದಿಲ್ಲ. ಇದೇ ಕಾರಣಕ್ಕೆ ಒಟಿಟಿಯಿಂದ ಬಂದ ನೂರು ಕೋಟಿ ಆಫರ್ ತಿರಸ್ಕರಿಸಿ ಚಿತ್ರಮಂದಿರದಲ್ಲೇ ರಿಲೀಸ್ ಮಾಡೋಕೆ ಮುಂದಾಗಿರೋದಾಗಿ ಜಾಕ್ ಮಂಜು ಹೇಳಿದ್ದಾರೆ.
ಅನೂಪ್ ಬಂಡಾರಿ ನಿರ್ದೇಶನ ಮಾಡಿರುವ ಕಿಚ್ಚು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ 14 ಭಾಷೆಯಲ್ಲಿ ತೆರೆಗೆ ಬರೋಕೆ ಸಿದ್ದವಾಗಿದೆ. ಯಾವುದೇ ಅಡೆತಡೆ ಇಲ್ಲವಾದ್ರೆ ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆಯಾಗೋ ಸಾಧ್ಯತೆ ಇದೆ. ಕೊರೊನಾ ಕಾರಣದಿಂದ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳ ರಿಲೀಸ್ ಡೇಟ್ ಮುಂದೂಡಿದ್ದು ಏಪ್ರಿಲ್ ನಲ್ಲಿಯೇ ಬಿಡುಗಡೆಗೆ ತಯಾರಿ ನಡೆಸಿವೆ. ಹೀಗಾಗಿ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಕೊಂಚ ಮುಂದೆ ಹೋದ್ರು ಅಚ್ಚರಿ ಇಲ್ಲ.