LIFESTYLE:
ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಹೃದಯ ಕಸಿಗೊಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿಗೊಳಗಾಗಿದ್ದ ಡೇವಿಡ್ ಬೆನೆಟ್(58) ಶಸ್ತ್ರಚಿಕಿತ್ಸೆ ನಡೆದು 2 ತಿಂಗಳ ನಂತರ ಮೃತಪಟ್ಟಿದ್ದಾಗಿ ವರದಿಯಾಗಿದೆ. ಅಮೆರಿಕ ವೈದ್ಯರು 2022ರ ಜನವರಿ 11 ರಂದು ಡೇವಿಡ್ ಬೆನೆಟ್ ಎಂಬ ವ್ಯಕ್ತಿಗೆ ಹಂದಿ ಹೃದಯ ಕಸಿ ಮಾಡಿದ್ದರು. ಆದರೆ ಹೃದಯ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಡೇವಿಡ್ ನಿನ್ನೆ(ಮಾ.9) ನಿಧನರಾಗಿದ್ದಾರೆ.
ಡೇವಿಡ್ ಅವರಿಗೆ ಹಂದಿ ಹೃದಯದ ಕಸಿ ಮಾಡಲಾಗಿದ್ದು ಈ ಕುರಿತಾಗಿ ಸಾಕಷ್ಟು ಸುದ್ದಿಯಾಗಿತ್ತು. ಈ ಪ್ರಯೋಗ ಯಶಸ್ವಿಯಾದರೆ ಮುಂದೆ ಸಾಕಷ್ಟು ಶಸ್ತ್ರಚಿಕಿತ್ಸೆಗಳನ್ನ ಮಾಡೋ ಭರವಸೆಯನ್ನ ಅಮೆರಿಕ ವೈದ್ಯರು ತಿಳಿಸಿದ್ದರು. ಆದರೆ ಹಂದಿ ಹೃದಯ ಕಸಿ ಆದ ಬಳಿಕ ಡೇವಿಡ್ ಅವರ ಆರೋಗ್ಯ ಹದಗೆಡುತ್ತಾ ಬಂದಿದ್ದು ನಿನ್ನೆ ಮೃತಪಟ್ಟಿದ್ದಾರೆ.
ಮೇರಿಲ್ಯಾಂಡ್ ನಿವಾಸಿ ಬೆನೆಟ್ ಹೃದಯ ಮತ್ತು ಶ್ವಾಸಕೋಶ ತೊಂದರೆಯಿಂದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದರು. ಬೆನೆಟ್ ಆರೋಗ್ಯ ತುಂಬ ಕ್ಷೀಣವಾಗಿದ್ದ ಕಾರಣ, ಮನುಷ್ಯ ಹೃದಯವನ್ನ ಕಸಿ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ತಳಿ ಮಾರ್ಪಾಡು ಮಾಡಿದ ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಆದರೆ 2 ತಿಂಗಳಲ್ಲಿಯೇ ಡೇವಿಡ್ ಬೆನೆಟ್ ಆರೋಗ್ಯ ಕ್ಷೀಣಿಸಿ ಮೃತಪಟ್ಟಿದ್ದಾರೆ.
ಹಂದಿ ಹೃದಯ ಕಸಿಯಾದ ಬಳಿಕ ಆರಂಭದಲ್ಲಿ ಬೆನೆಟ್ ಆರೋಗ್ಯವಾಗಿಯೇ ಇದ್ದರು. ಈ ಕುರಿತು ಬೆನೆಟ್, ಆತನ ಕುಟುಂಬಸ್ಥರು ಹಾಗೂ ವೈದ್ಯರು ಸಂತಸ ವ್ಯಕ್ತಪಡಿಸಿದ್ದರು. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಹಂದಿ ಹೃದಯದ ಯಶಸ್ವಿ ಕಸಿ ಎಂಬ ಖ್ಯಾತಿಯನ್ನ ಅಮೆರಿಕ ವೈದ್ಯರು ಪಡೆದುಕೊಂಡಿದ್ದರು. ಮುಂದಿನ ದಿನಗಳಲ್ಲಿ ಹಂದಿ ಹೃದಯವನ್ನು ಮಾನವನಿಗೆ ಕಸಿ ಮಾಡುವ ಮೂಲಕ ಅಂಗಾಂಗ ಕೊರತೆ ನೀಗಿಸಬಹುದು ಎಂದೇ ಹೇಳಲಾಗಿತ್ತು. ಆದರೆ ಇದೀಗ ಬೆನೆಟ್ ನಿಧನರಾಗಿರೋದು ವೈದ್ಯರಿಗೆ ಬೇಸರ ಮೂಡಿಸಿದೆ.