UNCATEGORIZED:
ಬರಹ: ಕಿರುಗುಂದ ರಫೀಕ್
ಚಿಕ್ಕಮಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಜನರಿಗೆ ಕೆಲವೆಡೆ ದಾನಿಗಳು ತಮ್ಮ ಕೈಲಾದ ರೀತಿಯಲ್ಲಿ ಸಹಾಯ, ದಾನ ಮಾಡುತ್ತಿರುವುದು ಕಂಡುಬರುತ್ತಿದೆ. ಹಾಗೆಯೇ ಇಲ್ಲಿ ಗ್ರಾಮದ ಬೀದಿಬದಿಗಳಲ್ಲಿ ಬೆಳೆದಿದ್ದ ಕಳೆಗಳಿಗೆ ಕಳೆನಾಶಕ ಸಿಂಪಡಿಸುವ ಮೂಲಕ ಗ್ರಾಪಂ ಸದಸ್ಯರೋರ್ವರು ತಮ್ಮದೇ ಖರ್ಚಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.
ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ತಿಗಡ ಗ್ರಾಪಂ ಸದಸ್ಯ ತಣಿಗೆಬೈಲಿನ ರಮೇಶ್ ಗೋವಿಂದೇಗೌಡ ತಮ್ಮದೇ ಖರ್ಚಿನಿಂದ ಜಯಪುರದ ಎಲ್ಲಾ ರಸ್ತೆ ಬದಿಯಲ್ಲಿ ದಟ್ಟವಾಗಿ ಬೆಳೆಯತೊಡಗಿದ್ದ ಗಿಡಗಂಟಿ, ಕಳೆಗಳನ್ನು ನಾಶಪಡಿಸಲು ಸ್ಪ್ರೇಯರ್ ಯಂತ್ರ ಮತ್ತುಇಬ್ಬರು ಕೆಲಸಗಾರರ ಮೂಲಕ ಕಳೆನಾಶಕ ಸಿಂಪಡನೆ ಮಾಡಿಸಿದ್ದಾರೆ.
ಅಲ್ಲದೆ ತಮ್ಮ ಗ್ರಾಪಂ ವ್ಯಾಪ್ತಿಯ ಕೆಮ್ಮಣ್ಣುಗುಂಡಿ ಗ್ರಾಮದಲ್ಲಿ ಪಡಿತರ ಚೀಟಿ ಹೊಂದಿಲ್ಲದ ಐದು ಬಡಕುಟುಂಬಗಳಿಗೆ ರಮೇಶ್ ಗೋವಿಂದೇಗೌಡ ತಮ್ಮ ಸ್ವಂತ ಖರ್ಚಿನಿಂದ ತಲಾ 10 ಕೆ.ಜಿ.ಅಕ್ಕಿ ವಿತರಿಸಿದ್ದಾರೆ. ಕೆಲವೆಡೆ ಕರೋನಾ ಸೋಂಕಿತರು ಕಂಡುಬಂದಾಗ ಅಂತಹ ಕುಟುಂಬಸ್ಥರಿಗೆ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಹೀಗೆ ಅನೇಕ ಸೇವಾಕಾರ್ಯದಲ್ಲಿ ಭಾಗಿಯಾಗಿರುವ ಇವರು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
---------
[caption id="attachment_1254" align="alignleft" width="300"]
ರಮೇಶ್ ಗೋವಿಂದೇಗೌಡ[/caption]
“ಗ್ರಾಮದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಲಭ್ಯವಿರುವುದಿಲ್ಲ. ರಸ್ತೆಬದಿಗಳಲ್ಲಿ ಕಳೆ ಬೆಳೆದಿದ್ದರಿಂದ ಸ್ವಂತ ಖರ್ಚಿನಲ್ಲಿ ಕಳೆನಾಶಕ ಹೊಡೆಸಿದ್ದೇನೆ. ಜನ ನಮ್ಮನ್ನು ನಂಬಿ ವಿಶ್ವಾಸವಿಟ್ಟು ನಮ್ಮಿಂದ ಏನಾದರೂ ಬದಲಾವಣೆ ಆಗಬಹುದೆಂದು ಬಯಸಿರುತ್ತಾರೆ. ಹೀಗಾಗಿ ನನ್ನಿಂದ ಸಾಧ್ಯವಾದಷ್ಟು ಕೆಲಸಗಳನ್ನು ಸ್ವಂತ ಖರ್ಚಿನಿಂದಲೇ ಮಾಡಿಸುತ್ತಿದ್ದೇನೆ”
-ರಮೇಶ್ ಗೋವಿಂದೇಗೌಡ, ಗ್ರಾಪಂ ಸದಸ್ಯ