COLUMNS: ಪ್ರಸ್ತುತ ----------------- ಎಂ ಹೈದರ್ ಕಾಶ್ಮೀರ ಸಮಸ್ಯೆಗೆ 370ನೇ ವಿಧಿ ಕಾರಣವೆಂದು ಹೇಳಿ 2019ರ ಆಗಸ್ಟ್ 5 ರಂದು ಅದನ್ನು ರದ್ದುಗೊಳಿಸಿದ್ದ ಕೇಂದ್ರಕ್ಕೆ ಜನರ ಮೇಲೆ ಬಲಪ್ರಯೋಗದಿಂದ ರಾಜ್ಯವನ್ನು ಆಳುವುದು ಸುಲಭವಲ್ಲ ಎಂಬುದು ಕಳೆದ 23 ತಿಂಗಳಲ್ಲಿ ಅರಿವಿಗೆ ಬಂದಂತೆ ಭಾಸವಾಗುತ್ತಿದೆ. 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಬಿಜೆಪಿಯು ತನ್ನ ದೊಡ್ಡ ಸಾಧನೆಯೆಂದು ಪದೇ ಪದೇ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು. ಬೆಂಬಲಿಗರಿಂದ ದೊಡ್ಡ ಚಪ್ಪಾಳೆ ಗಿಟ್ಟಿಸಿಕೊಂಡಿತ್ತು. ಆದರೆ ಅದರ ನಿರೀಕ್ಷೆಗೆ ತಕ್ಕ ಫಲ ಸಿಕ್ಕಂತೆ ಕಾಣುತ್ತಿಲ್ಲ. ಅವರುಗಳು ಹೇಳಿದಂತೆ ಯಾವುದೇ ರೀತಿಯ ಅಭಿವೃದ್ದಿಯಾಗಿಲ್ಲ ಉದ್ಯೋಗ ಸೃಷ್ಟಿಯಾಗಿಲ್ಲ. ಕಾಶ್ಮೀರೀ ಕನ್ಯೆಯರನ್ನು ಮದುವೆಯಾಗಿ, ಕಾಶ್ಮೀರದಲ್ಲಿ ಮನೆ ಮಾಡುವ ಕನಸು ಕಂಡವರ ಕನಸು ನನಸಾಗಿಲ್ಲ. ಕಾಶ್ಮೀರದ ಪರಿಸ್ಥಿತಿಯಲ್ಲಿ ಅವರು ಹೇಳಿದ ಬದಲಾವಣೆ ಆಗಿಲ್ಲ ಸರ್ಕಾರದ ಧೋರಣೆಯ ವಿರುದ್ಧ ಧ್ವನಿ ಎತ್ತಿದವರನ್ನು ಅಭಿವೃದ್ದಿಗೆ ತೊಡಕು ಉಂಟು ಮಾಡುತ್ತಾರೆ ಎಂದು ಬಂಧನಕ್ಕೆ ಒಳಪಡಿಸಿದ್ದೆ ಅವರ ಸಾಧನೆಯಾಯಿತು . ಈಗ ಇಂತಹ ಪರಿಸ್ಥಿತಿಯ ನಡುವೆ ದೇಶದ ಸುರಕ್ಷತೆಗೆ ಅಪಾಯ ಉಂಟುಮಾಡುತ್ತಾರೆ ಎಂದು ತಾನೇ ಬಂದನದಲ್ಲಿಟ್ಟಿದ್ದ ನಾಯಕರ ಜೊತೆ ಕುಳಿತು ಕೇಂದ್ರ ಮೂರುವರೆ ತಾಸು ಮಾತುಕತೆ ನಡೆಸಿ ಜಮ್ಮು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡುವ ಭರವಸೆ ನೀಡಿದೆ. 2019ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜೂ. 24ರಂದು ರಾಷ್ಟ್ರ ರಾಜಧಾನಿ ದೆಹಲಿಯ ತಮ್ಮ ಅಧಿಕೃತ 7 ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಗುರುವಾರ ಸತತ ಮೂರುವರೆ ಗಂಟೆಗಳ ಕಾಲ ಜಮ್ಮು ಮತ್ತು ಕಾಶ್ಮೀರದ ಉನ್ನತ ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ರಾಜ್ಯದ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 14 ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಭಾಗವಹಿಸಿದ್ದರು. 2019 ಆಗಸ್ಟ್ 5ರಿಂದ ಕಾಶ್ಮೀರದ ಜನ ಕಷ್ಟದಲ್ಲಿದ್ದಾರೆ, ಕಾಶ್ಮೀರದ ಜನ ಸಿಟ್ಟಿನಿಂದಿದ್ದಾರೆ, ಕಾಶ್ಮೀರದ ಜನ ಆಕ್ರೋಶದಿಂದಿದ್ದಾರೆ. ಯಾರಾದರೂ ಜೋರಾಗಿ ಉಸಿರಾಡಿದರೆ UAPA ಅಡಿ ನಮ್ಮನ್ನು ಜೈಲಿಗೆ ತಳ್ಳಬಹುದು ಎಂದು ಅವರಿಗೆ ಭಯವಾಗುತ್ತಿದೆ. ಯಾವ ರೀತಿಯಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಲಾಯಿತೋ ಅದು ಸಂಪೂರ್ಣ ಅಸಂವಿಧಾನಿಕವಾಗಿತ್ತು. ಇಲ್ಲಿ ನಿರುದ್ಯೋಗವಿದೆ, ಉದ್ಯೋಗ ಹೊಂದುವುದು ಕಾಶ್ಮೀರದ ಹಕ್ಕಾಗಿದೆ, ಯುವಕರ, ಕಾರ್ಮಿಕರ ಬದುಕು ದುಸ್ತರವಾಗಿದೆ ಅವರಿಗೆ ಬದುಕು ಮತ್ತೆ ಕಟ್ಟಿಕೊಡಬೇಕಾಗಿದೆ, ಅದಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಬೇಕು. ಕಾಶ್ಮೀರದ ಜನರಿಗೆ ರಾಜ್ಯದ ಸ್ಥಾನಮಾನ ಪಾಕಿಸ್ತಾನದಿಂದ ಸಿಕ್ಕಿಲ್ಲ. ಅದು ನಮ್ಮದೇ ನೆಲದಿಂದ ಸಿಕ್ಕಿದೆ. ಪಂಡಿತ್ ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಂದ ಸಿಕ್ಕಿದೆ. ನಮಗೆ ನಮ್ಮ ಹಕ್ಕು ದೊರೆಯಬೇಕು. ಅದಕ್ಕಾಗಿ ನಾವು ಶಾಂತಿಯುತವಾಗಿ ಕಾನೂನಿನ ಚೌಕಟ್ಟಿನೊಳಗೆ ಹೋರಾಟ ನಡೆಸಿಯೇ ತೀರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ವಿಷಯವಾಗಿ ಕರೆದಿದ್ದ ಸಭೆಯಲ್ಲಿ ಪಿಡಿಪಿ ನಾಯಕಿ ಮೆಹಬೂಬಾ ಮುಪ್ತಿ ಕಾಶ್ಮೀರ ಧ್ವನಿಯನ್ನು ಮಂಡಿಸಿದ್ದೇವೆ ಎಂದರು. ಒಟ್ಟಾರೆ ಮಾತುಕತೆ ಫಲಪ್ರದ ರೀತಿಯಲ್ಲಿ ನಡೆಯಿತು ಎಂದು ಸಭೆ ಬಳಿಕ ಮಾಧ್ಯಮಗಳ ಮುಂದೆ ಮುಪ್ತಿ ತಿಳಿಸಿದರು. ನಾವು ಸಭೆಯಲ್ಲಿ 5 ಬೇಡಿಕೆಗಳನ್ನು ಇಟ್ಟಿದ್ದೆವು. ಶೀಘ್ರದಲ್ಲೇ ಜಮ್ಮು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ಮರಳಿಸಬೇಕು, ಪ್ರಜಾಪ್ರಭುತ್ವವನ್ನು ಪುನಃ ಸ್ಥಾಪಿಸಲು ವಿಧಾನಸಭಾ ಚುನಾವಣೆಗಳನ್ನು ನಡೆಸುವುದು, ಜಮ್ಮು ಮತ್ತು ಕಾಶ್ಮೀರದ, ಕಾಶ್ಮೀರಿ ಪಂಡಿತರಿಗೆ ಘರ್ ವಾಪ್ಸಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು, ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆ ಮಾಡಬೇಕು ಮತ್ತು ನಮ್ಮ ಜಮೀನು ಮತ್ತು ಉದ್ಯೋಗಕ್ಕೆ ಖಾತರಿ ನೀಡುವ ವಿಧೇಯಕ ಜಾರಿಗೊಳಿಸಬೇಕು ಎಂಬುದು ಆ 5 ಬೇಡಿಕೆಗಳು. ಅಂತೆಯೇ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡನೆಯ ನಂತರ ಚುನಾವಣೆ ನಡೆಸಲಾಗುವುದು. ನಂತರ ರಾಜ್ಯದ ಸ್ಥಾನಮಾನ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗುವ ಭರವಸೆ ಸಿಕ್ಕಿದೆ ಎಂದು ಸಭೆಯ ನಂತರ ಮಾಧ್ಯಮಗಳಿಗೆ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ತಿಳಿಸಿದ್ದಾರೆ. ಪ್ರಧಾನಿ ನಡೆಸಿದ ಸಭೆಯ ಬಳಿಕ ನ್ಯಾಷನಲ್ ಕಾನ್ಫರೆನ್ಸ್ ಒಮರ್ ಅಬ್ದುಲಾ, ನಾವು 2019ರ ಆಗಸ್ಟ್ 5ರ ಕೇಂದ್ರದ ಕ್ರಮವನ್ನು ನಾವು ಒಪ್ಪುವುದಿಲ್ಲ. ಆದರೆ ನಾವು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ನಾವು ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ಕೇಂದ್ರ ಮತ್ತು ರಾಜ್ಯದ ನಡುವೆ ವಿಶ್ವಾಸದ ಕೊರತೆಯಾಗಿದೆ ಅದರ ಪುನರ್ಸ್ಥಾಪನೆ ಯಾಗಬೇಕು ಎಂದರು. ಬಿಜೆಪಿಯ ರವೀಂದ್ರ ರೈನಾ, ಕವಿಂದರ್ ಗುಪ್ತ, ತಾರಾ ಚಂದ್ ಅವರು ಕೇಂದ್ರ ನಡೆಸಿದ ಸಭೆಗೆ ಜೈ ಎಂದರೆ. ಸಜ್ಜಾದ್ ಲೋನ್ ಮತ್ತು ಸಿಪಿಎಂನ ತಾರಿಗಾಮಿ ಅವರಿಂದ ಸಭೆಯ ಬಗ್ಗೆ ಮೌನ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ವ ಪಕ್ಷ ಸಭೆಯಲ್ಲಿ ನಡೆದ ಮಾತುಕತೆಗಳು ಕಾರ್ಯರೂಪಕ್ಕೆ ಇಳಿದರೆ ಸರ್ಕಾರ ತನ್ನ ತಪ್ಪು ಹೆಜ್ಜೆಯನ್ನು ಪರೋಕ್ಷವಾಗಿಯಾದರೂ ತಿದ್ದಿಕೊಂಡಂತಾಗಲಿದೆ. ಅದು ಸಮಾಧಾನರ ವಿಚಾರ ಎಂಬುದು ಹಲವರ ಅಭಿಪ್ರಾಯವಾಗಿದೆ.