DISTRICT:
ಚಿಕ್ಕಮಗಳೂರು: ವಾಹನಗಳು ಮಗುಚಿ ಬೀಳುವಷ್ಟು ಹೊಂಡಗಳಿಂದ ಕೂಡಿದ ವಾಟೇಗನಹಳ್ಳಿ ರಸ್ತೆಯ ಕುರಿತಾಗಿ ಸೆ.27ರಂದು 24x7 ಲೈವ್ ಕನ್ನಡದಲ್ಲಿ ವಿಶೇಷ ವರದಿಯಾಗಿದ್ದ ಪರಿಣಾಮ ಎಚ್ಚೆತ್ತಿರುವ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಅಂದಾಜು 4 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಂದಿ-ವಾಟೇಗನಹಳ್ಳಿ ಮೂಲಕ ಹಾದು ಹೋಗುವ ಸುಮಾರು 5 ಕಿ.ಮೀ.ಯಷ್ಟು ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ 20ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಗಿತ್ತು.
ಜಿಲ್ಲೆಯ ಗ್ರಾಮೀಣ ಭಾಗದ ಹಲವು ರಸ್ತೆಗಳು ಅಭಿವೃದ್ಧಿ ಕಾಣದೆ ಹದಗೆಟ್ಟು ಹೋಗಿವೆ. ಜನ ಎಷ್ಟೇ ಪ್ರತಿಭಟಿಸಿದರೂ ಆಡಳಿತ ವರ್ಗದವರ ನಿರ್ಲಕ್ಷ್ಯತನ, ಅಧಿಕಾರಿಗಳ ಬೇಜವಾಬ್ದಾರಿತನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂಬುದಕ್ಕೆ ಇಂತಹ ರಸ್ತೆಗಳು ಧ್ಯೋತಕವಾಗಿವೆ.
ಸಂಬಂಧಿಸಿದ ಇಲಾಖೆಗಳು ರಸ್ತೆಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕೆಂಬ ನಿಯಮವಿದ್ದರೂ ಆ ನಿಯಮಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿವೆ ಎಂಬುದೇ ತಿಳಿಯದಂತಾಗಿದೆ.